Wednesday, September 2, 2009

ಜಾಲಮಂಗಲದ ಲಕ್ಷ್ಮಿನಾರಾಯಣ ಸ್ವಾಮಿ ಬೆಟ್ಟ











ಬೆಂಗಳೂರಿನಿಂದ ರಾಮನಗರಕ್ಕೆ ೫೦ ಕಿ.ಮೀ.ಬಂದು ಅಲ್ಲಿಂದ ಜಾಲಮಂಗಲಕ್ಕೆ ೧೭ ಕಿ.ಮೀ.ಕ್ರಮಿಸಿದರೆ ಅಕ್ಕೂರಿಗೆ ಹೋಗುವ ದಾರಿಯಲ್ಲಿ ಲಕ್ಷ್ಮಿನಾರಾಯಣ ಸ್ವಾಮಿ ಬೆಟ್ಟ ಕಾಣಿಸುತ್ತದೆ.ಬೆಟ್ಟ ಹತ್ತಲು ಎರಡು ದಾರಿಗಳಿವೆ.ಮುಂದೆ ಕಾಣುವ ದೊಡ್ಡ ಕೆರೆಯ ಪಕ್ಕದಲ್ಲಿ ಸಾಗುವ ಮೆಟ್ಟಿಲುಗಳಿರುವ ಮಾರ್ಗ ಒಂದು.ಕೆರೆಯನ್ನು ಹಾದು ಬಲಗಡೆಗೆ ತಿರುಗಿ ಹೋಗುವ ದುರ್ಗಮ ದಾರಿ ಇನ್ನೊಂದು. ನಾನು ಮತ್ತು ಜಾಲಮಂಗಲದಲ್ಲೆ ಜೂನಿಯರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿರುವ ನನ್ನ ಪತ್ನಿ ಬಿ.ಎಲ್.ಸರೋಜಮ್ಮ ಕೂಡಿ ಬೆಟ್ಟ ಹತ್ತಲು ಮನಸ್ಸು ಮಾಡಿದೆವು.ಮೊದಲು ನಮಗೆ ದಾರಿ ಗೊತ್ತಿಲ್ಲದಿದ್ದರಿಂದ ಬೈಕಿನಲ್ಲಿ ಕೆರೆಯನ್ನು ದಾಟಿ ಮುಂದೆ ಹೋಗಿದ್ದರಿಂದ ಅಲ್ಲಿ ಎದುರಿಗೆ ಬರುತ್ತಿದ್ದ ಹೆಂಗಸೊಬ್ಬಳನ್ನು ವಿಚಾರಿಸಿದಾಗ ಆಕೆ ಅಲ್ಲೇ ಇದ್ದ ಕಾಲು ದಾರಿಯನ್ನು ತೋರಿಸಿದಳು.
ಬೆಟ್ಟ ಹತ್ತಲು ಶುರು ಮಾಡಿದಂತೆ ನಾವು ಹೋಗುತ್ತಿರುವ ದಾರಿಯ ಅಪಾಯದ ಅರಿವಾಗತೊಡಗಿತು.ಕಲ್ಲಿನ ಮೇಲೆ ಕಲ್ಲನ್ನು ಜೋಡಿಸಿ ಎತ್ತರೆತ್ತರಕ್ಕೆ ಏರತೊಡಗಿದಂತೆಯೇ ಇಕ್ಕಟ್ಟಾದ ಬಂಡೆಗಳ ನಡುವೆ ನುಸುಳಿ ಹಾಗೂ ಹೀಗೂ ಪರಸ್ಪರ ಕೈ ಹಿಡಿದು ಸಾಗಿ ಎಮ್ಮೆ ಕೊಳದ ಬಳಿ ನಿಂತೆವು.ಅಲ್ಲಿ ಬೆಳೆದಿರುವ ಅಪಾರವಾದ ಹುಲ್ಲಿನ ರಾಶಿ ಮತ್ತು ಬೀಸುತ್ತಿರುವ ತಂಗಾಳಿ ನಮ್ಮ ಆಯಾಸವನ್ನೆಲ್ಲ
ಪರಿಹರಿಸಿತು.ಅಲ್ಲಿಂದ ಮುಂದಕ್ಕೆ ಸ್ವಲ್ಪ ಕಡಿದಾದ ಮೆಟ್ಟಿಲುಗಳನ್ನು ಹಾದು ಬೆಟ್ಟದ ತುದಿಯನ್ನು ಏರಿದೆವು.
ಲಕ್ಷ್ಮಿ ನಾರಾಯಣ ಸ್ವಾಮಿಯ ದೇವಸ್ಥಾನ ಹೆಂಚುಗಳ ಮಾಡಿನಿಂದ ಕೂಡಿದ್ದು ಅಲ್ಲಿಯವರೆಗೆ ಸಾಮಗ್ರಿಗಳನ್ನು ಹೊತ್ತು ದೇವಾಲಯ ನಿರ್ಮಾಣ ಮಾಡಿರುವುದು ಮನುಷ್ಯನ ಭಕ್ತಿಯ ಪರಾಕಾಷ್ಠೆಯೆ ಸರಿ. ಮೇಲೆ ಒಂದಿಷ್ಟು ಕೊಂಡಮಾವನ ಮರಗಳಿವೆ.
ದೇವಾಲಯದ ಎದುರುಗಡೆ ಗರುಡಗಂಬವಿದೆ.
ದೇವಾಲಯದ ಕೆಳ ಭಾಗದಲ್ಲಿ ಅಕ್ಕ ತಂಗಿಯರ ಕೊಳಗಳಿವೆ.ಕೊಳದ ಪಕ್ಕದಲ್ಲಿ ಸ್ನಾನದ ಮನೆಗಳಿವೆ.ಕೊಳದ ದಡಗಳು ಮೀನಿನ ಆಕಾರದಲ್ಲಿರುವುದು ಸೋಜಿಗವನ್ನುಂಟು ಮಾಡುತ್ತವೆ.ಇಲ್ಲಿ ಅಕ್ಕತಂಗಿಯರು ಕೊಳದಲ್ಲಿ ಮೀಯುತ್ತಿದ್ದಾಗ ಎಮ್ಮೆಗಳನ್ನು ಮೇಯಿಸುತ್ತಿದ್ದ ಅಣ್ಣ ಆಕಸ್ಮಿಕವಾಗಿ ಅಲ್ಲಿ ಬಂದಾಗ ಇದನ್ನು ನೋಡಿದ ಅಕ್ಕ ತಂಗಿಯರು ಅದೇ ನೀರಿನಲ್ಲಿ ಮುಳುಗಿ ಸತ್ತು ಹೋದರೆಂದೂ ಇದರಿಂದ ಮನನೊಂದ ಅಣ್ಣ ಎಮ್ಮೆಗಳನ್ನು ಕೆಳಕ್ಕೆ ತಳ್ಳಿ ತಾನೂ ಹಾರಿ ಆತ್ಮ ಹತ್ಯೆ ಮಾಡಿಕೊಂಡನೆಂದೂ
ದಂತಕತೆಯಾಗಿದೆ.
ಕೆಳಗೆ ನಾವು ಹತ್ತುವಾಗ ನೋಡಿದ ಕೊಳವೇ ಎಮ್ಮೆಗಳನ್ನು ಇಲ್ಲಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡ ಸ್ಥಳ.ನಮ್ಮ ಜನಪದರ ನೈತಿಕ ನೆಲೆಗಳನ್ನು ನಾವಿಲ್ಲಿ ಗುರುತಿಸಬಹುದಾಗಿದೆ.ನಾವು ಬೆಟ್ಟದಿಂದ ಇಳಿದು ಬಂದ ನಂತರ ಹಾಡು ಹಗಲಿನಲ್ಲೇ ಅಲ್ಲಿ ಕರಡಿಗಳು ಇರುತ್ತವೆಂಬ ವಿಷಯ ಗೊತ್ತಾಗಿ ಭಯವಾಯಿತು.
ಬೆಟ್ಟದ ಮೇಲಕ್ಕೆ ಹೋಗಿ ಅಲ್ಲಿಯ ಸುತ್ತಮುತ್ತಲು ಕಣ್ಣು ಹಾಯುವವರೆಗೂ ನೋಡಿದೆವು.ತಂಗಾಳಿಯನ್ನು ಇಬ್ಬರೆ ಸವಿದೆವು.ಸುತ್ತ ಮುತ್ತಲೂ ವಿಶಾಲವಾದ ಬಯಲು ಪ್ರದೇಶ, ಮರ ಗಿಡಗಳು,ಸಾವನ ದುರ್ಗವೂ ಸೇರಿದಂತೆ ಬೆಟ್ಟ ಗುಡ್ಡಗಳು,ಗ್ರಾಮಗಳು ಕಣ್ಣೆಟುಗುವವರೆಗಿನ ಆಕಾಶ ಎಲ್ಲವನ್ನೂ ಮನತುಂಬಿಕೊಂಡೆವು. ಅರವತ್ತರ ಹರೆಯದಲ್ಲೂ ಹುಡುಗರ ಹಾಗೆ ಸಾಹಸ ಮಾಡಿದ ನೆನಪು ನಮ್ಮಲ್ಲಿ ಸದಾ ಹಸಿರಾಗಿ ಉಳಿದಿದೆ.

No comments: