Wednesday, September 9, 2009

ಸಂಸ್ಕೃತ ವಿಶ್ವವಿದ್ಯಾಲಯ ಬೇಕೆ?

ಸಂಸ್ಕೃತ ವಿ.ವಿ.ಕುರಿತಾದ ವಿವಿಧ ಅಭಿಪ್ರಾಯಗಳು ಸಾಹಿತಿಗಳು,ಸಾಮಾನ್ಯರು ಹಾಗೂ ಭಾಷಾಭಿಮಾನಿಗಳು ಮುಂತಾದ ಸಮಾಜದ ವಿವಿಧ ಕ್ಷೇತ್ರಗಳ ಜನರಿಂದ ವ್ಯಕ್ತವಾಗುತ್ತಿವೆ.ರಾಜಕಾರಿಣಿಗಳು ಕೈಗೊಳ್ಳುವ ಎಲ್ಲ ನಿರ್ಧಾರಗಳ ಹಿಂದೆ ಕೆಲಸ ಮಾಡುವ ಬಹು ಮುಖ್ಯವಾದ ಮನಸ್ಸೊಂದಿದೆ ಅದು ಜನಪ್ರಿಯತೆ. ಜನತೆಯಲ್ಲಿ ಅಥವ ಸಮಾಜದ ಒಂದು ವರ್ಗದಲ್ಲಿ ಒಳಿತು ಮಾಡುವ ನೆಪದಲ್ಲಿ ಓಟು ಬ್ಯಾಂಕುಗಳನ್ನು ನಿರ್ಮಾಣ ಮಾಡಿಕೊಳ್ಳುವುದು.ಒಂದೊಂದು ಧರ್ಮದವರಾಗಬಹುದು, ಜಾತಿಯವರಾಗಿರಬಹುದು, ಅಥವ ಅಲ್ಪಸಂಖ್ಯಾತರಾಗಿರಬಹುದು,ಅಲ್ಪಭಾಷಿಕರಾಗಿರಬಹುದು ಅವರನ್ನು ದೇವರ ನೆಪದಲ್ಲಿ ಧರ್ಮದ ಹೆಸರಿನಲ್ಲಿ ಭಾಷೆಯ ನೆಪದಲ್ಲಿ ತೃಪ್ತಿಪಡಿಸಿ ಆಭಿವೃದ್ಧಿಯ ಮಂಕುಬೂದಿ ಎರಚುತ್ತ ಅಧಿಕಾರವನ್ನು ಭದ್ರಪಡಿಸಿಕೊಳ್ಳುವ ಹುನ್ನಾರವನ್ನು ಎಲ್ಲ ರಾಜಕೀಯ ಪಕ್ಷಗಳೂ ಮಾಡುತ್ತ ಬಂದಿವೆ.ನಮ್ಮಲ್ಲಿ ವಿಚಾರವಾದಿಗಳೆನಿಸಿಕೊಂಡವರು ಸರ್ಕಾರವು ನೀಡುವ ಹುದ್ದೆಗಳಿಗನುಗುಣವಾಗಿ ಪ್ರಶಸ್ತಿ ಸನ್ಮಾನಗಳಿಗನುಣವಾಗಿ ಕಾಲದಿಂದ ಕಾಲಕ್ಕೆ ತಮ್ಮ ನಿಲುವುಗಳನ್ನು ಬದಲಾಯಿಸಿಕೊಳ್ಳುತ್ತ ಗೋಸುಂಬೆಗಳಾಗಿದ್ದಾರೆ.ಭಾಷಾ ಬೋಧಕರೂ ಭಾಷಾ ತಜ್ಞರೂ ಆಗಿರುವ ಕೆಲವರು ತಾವು ಕಲಿತಿರುವ ತಿಳಿವಳಿಕೆಗೆ ನಿಷ್ಠರಾಗದೆ ಮುಂಬಡ್ತಿಗಳಿಗೋ ಅಥವ ಸರ್ಕಾರಕ್ಕೋ ಹೆದರಿ ಜಾಣಕುರುಡುತನವನ್ನು ಅಭಿನಯಿಸುತ್ತಾರೆ. ಹೀಗಾಗಿ ನಮ್ಮಲ್ಲಿ ಸತ್ಯಗಳು ಕೆಲವೊಮ್ಮೆ ಜಾತಿ,ಗುಂಪು,ಧರ್ಮ,ಪಕ್ಷಗಳಿಗನುಗುಣವಾಗಿ ರೂಪುಗೊಳ್ಳುತ್ತವೆ.
ಯಾವುದೇ ಭಾಷೆ ಸಹಜವಾಗಿ ತಾನಾಗಿಯೆ ತ್ಯಾಜ್ಯವೂ ಅಲ್ಲ ಸ್ವೀಕೃತವೂ ಅಲ್ಲ.ಯಾವುದೋ ಒಂದು ಕಾಲದಲ್ಲಿ ಆ ಕಾಲದ ತಿಳಿವಳಿಕೆಯನ್ನು ತನ್ನ ಗರ್ಭದಲ್ಲಿ ಇರಿಸಿಕೊಂಡ ಮಾತ್ರಕ್ಕೆ ಅದಕ್ಕಾಗಿಯೇ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಅಲ್ಲಿ ಅನೇಕ ಹುದ್ದೆಗಳನ್ನು ನಿರ್ಮಿಸಿ ಕೋಟಿಗಟ್ಟಲೆ ಹಣವನ್ನು ವ್ಯಯ ಮಾಡಬೇಕಾದ ಅಗತ್ಯವಿದೆಯೆ?ಸಂಸ್ಕೃತದಲ್ಲಿರುವ ವಿದ್ಯೆ ಇವತ್ತಿನ ವೈಚಾರಿಕ ಹಾಗೂ ವೈಜ್ಞಾನಿಕ ಯುಗಕ್ಕೆ ಎಷ್ಟು ಪ್ರಸ್ತುತ? ಸಂಸ್ಕೃತ ಕಲಿಯಲು ಮತ್ತು ಅಭ್ಯಾಸ ಮಾಡಲು ಈಗಿರುವ ವಿಶ್ವವಿದ್ಯಾನಿಲಯಗಳಲ್ಲೆ ಸಾಧ್ಯವಿರುವಾಗ ಅದಕ್ಕಾಗಿಯೆ ಪ್ರತ್ಯೇಕ ಬಿಳಿಯ ಕುದುರೆಯ ಅಗತ್ಯವಿದೆಯೆ?
ಚಾಲ್ತಿಯಲ್ಲಿರುವ ಕನ್ನಡವನ್ನೇ ಆಡಳಿತ ಭಾಷೆಯನ್ನಾಗಿ ಮಾಡಲು ಇಷ್ಟು ವರ್ಷಗಳಾದರೂ ತಿಣುಕುತ್ತಿದ್ದೇವೆ.ವಿಜ್ಞಾನದ ವೇಗಕ್ಕೆ ಕನ್ನಡವನ್ನು ಅಣಿಗೊಳಿಸುವುದಕ್ಕೆ ಸರ್ಕಾರಗಳು ಎಷ್ಟು ಗಮನ ಹರಿಸಿವೆ? ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸ್ಥಿತಿ ಗತಿಗಳು ರಾಜಕೀಯದಷ್ಟೇ ಕುಲಗೆಟ್ಟುಹೋಗಿವೆ.ಮೈಸೂರು ವಿಶ್ವ ವಿದ್ಯಾನಿಲಯ ಪ್ರಕಟಿಸಿರುವ ಕನ್ನಡ ವಿಶ್ವಕೋಶ,ನಿಘಂಟುಗಳು ಕಾಲಕಾಲಕ್ಕೆ .ಪುನರ್ರೂಪುಗೊಳ್ಳದೆ. ಸ್ಥಾವರವಾಗಿವೆ.ಜನಪ್ರಿಯತೆಯ, ಓಟಿನ, ಅಧಿಕಾರದ ಕಪಿಮುಷ್ಠಿಯಲ್ಲಿ ಸಿಲುಕಿ ದೇಶ ಭ್ರಷ್ಠರ
ಕೈಯ್ಯಲ್ಲಿ ಸಿಲುಕಿ ನಲುಗುತ್ತಿದೆ.
ನಮ್ಮ ನಡುವೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ನಿಜವಾಗಿಯೂ ಎಷ್ಟು ಹಣ ಸದ್ವಿನಿಯೋಗವಾಗುತ್ತಿದೆ? ಎಷ್ಟು ಹಣ ಯಾರು ಯಾರ ಜೇಬಿಗೆ ಸೇರುತ್ತದೆ ಎಂಬುದು ಕುರುಡನಿಗೂ ಕಾಣುವಷ್ಟು ನಿಚ್ಚಳವಾಗಿದೆ.ಯಾವುದೇ ಸಂಶೋಧಕ,ವಿಜ್ಞಾನಿ,ಉಪನ್ಯಾಸಕ ಜ್ಞಾನಕ್ಕೆ ಬದ್ಧನಾಗಿ ಕಾರ್ಯ ನಿರ್ವಹಿಸಿದರೆ ಬೌದ್ಧಿಕ ಜಗತ್ತು ವಿಸ್ತಾರವಾಗುತ್ತದೆ.ಹೊಸದಾಗಿ ವಿ.ವಿ.ನಿಲಯಗಳನ್ನು ಸ್ಥಾಪಿಸುವ ರಾಜಕಾರಣದ ಗಿಮಿಕ್ ಗಳಿಂದ ಸಂಸ್ಕೃತವೂ ಉದ್ಧಾರವಾಗುವುದಿಲ್ಲ;ಕನ್ನಡವೂ ಉದ್ಧಾರವಾಗುವುದಿಲ್ಲ.
ಇನ್ನು ಕನ್ನಡದಲ್ಲಿ ಇರುವ ಸಂಸ್ಕೃತ ಶಬ್ದಗಳ ಬಾಹುಳ್ಯದಿಂದ ಸಂಸ್ಕೃತ ವಿ.ವಿ.ದ ಅಗತ್ಯವನ್ನು ಸಮರ್ಥಿಸಲು ಹೊರಟಿದ್ದಾರೆ.ಪ್ರಪಂಚದ ಎಲ್ಲ ಭಾಷೆಗಳೂ ಶ್ರೀಮಂತವಾಗಿರುವುದು ಅನ್ಯ ಭಾಷಾ ಶಬ್ದಗಳ ಕೊಡು ಕೊಳ್ಳುವಿಕೆಯ ಮೂಲಕ ಎಂಬುದು ಪ್ರಾಥಮಿಕ ತಿಳಿವಳಿಕೆ.ಇದರಲ್ಲಿ ಸಂಸ್ಕೃತದ ಹೆಗ್ಗಳಿಕೆ ಏನೂ ಇಲ್ಲ.ಸಂಸ್ಕೃತ ದೇವ ಭಾಷೆ ಎನ್ನುವುದೂ ಭಾಷಾ ವಿಜ್ಞಾನದ ದೃಷ್ಟಿಯಿಂದ ಬಾಲಿಶ ಕಲ್ಪನೆ.ತಮಿಳರೂ ತಮ್ಮ ಭಾಷೆಯನ್ನು ದೇವ ಭಾಷೆ ಎಂದೇ ಹೇಳುತ್ತಾರೆ.ಹಾಗೆ ನೋಡಿದರೆ ಪ್ರಪಂಚದ ಎಲ್ಲ ಭಾಷೆಗಳೂ ದೇವ ಭಾಷೆ ಗಳೆ
"ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು;ಜೀವ ಧಾತೆಯನಿಂದು ಕರೆಯಬೇಕು." ಎನ್ನುತ್ತಾರೆ ರಾಷ್ಟ್ರಕವಿ ಕುವೆಂಪು.ಬದುಕಿರುವವರನ್ನು ಅಲಕ್ಷಿಸಿ ಕಳೆದು ಹೋದದ್ದರ ಬಗ್ಗೆ ಗೌರವ ಪ್ರೀತಿ ಇರಬೇಕಾದರೂ ಅದನ್ನೇ ಹಂಬಲಿಸುವುದರಲ್ಲಿ ಅರ್ಥವಿಲ್ಲ.
ರಾಜಕಾರಿಣಿಗಳು ಮುಡಿಸುವ ಹೂವು ಮುಳ್ಳಾಗಿರುವ ಸಂದರ್ಭಗಳೇ ಹೆಚ್ಚು.ಅವರ ಮಾತುಗಳಿಗೆ ಮರುಳಾಗಿ ನಾವು ನಾವೇ ಕಚ್ಚಾಡುವುದು ಹುಚ್ಚುತನವಾದೀತು.

3 comments:

Me, Myself & I said...

ಆತ್ಮೀಯ ಶಿವನಂಜಯ್ಯನವರೇ,

ಚೆನ್ನಾಗಿ ವಿವರಿಸಿದ್ದೀರಾ! ಸ್ವಲ್ಪ ಸ್ವಲ್ಪ ಅವೆಶದಲ್ಲಿಯೂ ಮಂಡಿಸಿದ್ದೀರ.

ನಾನು ಸಹ ನನ್ನ ಬ್ಲಾಗ್ ನಲ್ಲಿ ಇದಕ್ಕೆ ಸಂಬಂದ ಪಟ್ಟ ಬರಹವನ್ನೇ ಪ್ರಕಟಿಸಿರುವೆ. "ಭಾಷೆ ಮಾಧ್ಯಮ ಹಾಗೂ ಕಲಿಕೆ" ಅಂತ ಅದರ ಶೀರ್ಷಿಕೆ.ದಯವಿಟ್ಟು ಸಾಧ್ಯವಾದಲ್ಲಿ ಒಮ್ಮೆ ಓದಿ.

ಇಲ್ಲಿ ನಮ್ಮಿಬ್ಬರ ಅಭಿಪ್ರಾಯ ಪರಸ್ಪರ ತುಂಬಾ ಹೋಲುತ್ತದೆ.

Unknown said...

ಸರ್ ಸಂಸ್ಕೃತ ವಿ.ವಿ. ಖಂಡಿತಾ ಬೇಡ. ೀಗ ಿರುವ ವಿ.ವಿ.ಗಳ ಸಂಸ್ಕೃತ ವಿಭಾಗಗಳೇ ಮುಚ್ಚಿ ಹೋಗುವ ಹಂತದಲ್ಲಿವೆ. ಅವುಗಳಿಗೇ ವಿದ್ಯಾರ್ಥಿಗಳಿಲ್ಲ! ಅಲ್ಲಿರುವ ಮಹಾ ಮಹಾ ಉಪಾದ್ಯಯರೆಲ್ಲಾ ಈಗ ಕೆಲಸವಿಲ್ಲದೆ ವಾರಕ್ಕೆ ಒಂದು ಎರಡು ಪೀರಿಯಡ್ಡಿಗಳಿಗೆ ಇಳಿದುಬಿಟ್ಟಿದ್ದಾರೆ. ಅವರೇ ಹೆಚ್ಚಿನ ಸಂಶೋಧನೆ ಮಾಡಲು ಅನುವು ಮಾಡಿಕೊಟ್ಟರೆ ಸಾಕು. ಖಂಡಿತಾ ಇನ್ನಮೊಂದು ವಿವಿ ಅಗತ್ಯ ಿಲ್ಲ.

Me, Myself & I said...
This comment has been removed by the author.