Friday, October 16, 2009

ವೈ.ಜಿ.ಗುಡ್ಡ ಜಲಾಶಯ ಪ್ರವಾಸಿತಾಣವೋ ಪ್ರಯಾಸಿ ತಾಣವೋ?






ಎತ್ತಿನ ಮನೆ ಗುಲಗಂಜಿ ಗುಡ್ಡ ಮಾಗಡಿಯಿಂದ ಜಾಲಮಂಗಲ ಮಾರ್ಗದಲ್ಲಿ ಮತ್ತಿಕೆರೆಯ ಎಡತಿರುವಿನಲ್ಲಿ ೩.೫ ಕಿ.ಮೀ.ದೂರದಲ್ಲಿರುವ ಚಿಕ್ಕ ಜಲಾಶಯ.ಮಾಗಡಿಯಿಂದ ಹುಲಿಯೂರು ದುರ್ಗ ರಸ್ತೆಯಲ್ಲಿ ಅಗಲಕೋಟೆ ಹ್ಯಾಂಡ್ ಪೋಸ್ಟ್ ಬಳಿ ಎಡಕ್ಕೆತಿರುಗಿ ೬ ಕಿ.ಮೀ.ಸಾಗಿದರೆ ಮತ್ತಿಕೆರೆ ಸಿಗುತ್ತದೆ.ಇನ್ನೂ ಸಮೀಪದ ಮಾರ್ಗವೆಂದರೆ ಮಾಗಡಿಯ ಕೋಟೆಯ ಎದುರು ಎಡಕ್ಕೆ ತಿರುಗುವ ರಸ್ತೆಯಲ್ಲಿ ಹೋದರೆ ನೇರವಾಗಿ ಮತ್ತಿಕೆರೆಯ ಬಳಿಗೇ ಹೋಗಬಹುದು.
ವೈ.ಜಿ.ಗುಡ್ಡ ಕಣ್ವ ನದಿಗೆ ಅಡ್ಡಲಾಗಿ ಕಟ್ಟಿರುವ ಪುಟ್ಟ ಜಲಾಶಯ.ಸುಂದರ ಹಸಿರು ಗುಡ್ಡಗಳು,ವಿವಿಧಾಕೃತಿಯ ಬೆಟ್ಟಗಳು ಮನೋಹರವಾದ ದೃಶ್ಯ ವೈಭವ ಕಣ್ಸೆಳೆಯುತ್ತವೆ.ಸಣ್ಣ ನೀರಾವರಿ ಇಲಾಖೆಗೆ ಸೇರಿದ ಈ ಜಲಾಶಯದಿಂದ ಕೆಲವೆ ಎಕರೆಗಳಷ್ಟು ನೀರಾವರಿ ಸಾಧ್ಯವಾಗಿದೆ.ಕೆರೆ ನಿರ್ಮಾಣವಾದಂದಿನಿಂದ ಈ ಪ್ರದೇಶದಲ್ಲಿ ಸರಿಯಾಗಿ ಮಳೆಯೇ ಆಗದಿರುವುದರಿಂದ ತುಂಬಿತುಳಿಕಿದ್ದು ಕಡಿಮೆ.ಮೀನುಗಾರಿಕೆಗಷ್ಟೇ ಇದು ಬಳಕೆಯಾಗುತ್ತಿದೆ.
ಒಂದು ಉತ್ತಮ ಪ್ರವಾಸಿ ತಾಣವಾಗಬಹುದಾಗಿದ್ದ ಈ ಜಲಾಶಯಕ್ಕೆ ಹೋಗುವ ದಾರಿಯೇ ಚನ್ನಾಗಿಲ್ಲ. ಇಲ್ಲಿಗೆ ಇಂಜಿನೀಯರುಗಳೂ ಹೋಗುತ್ತಿಲ್ಲವೆಂದು ಕಾಣುತ್ತದೆ.ಒಂದಿಷ್ಟು ಹೊತ್ತು ಕೂತು ಜೊತೆಯಲ್ಲಿ ತಂದ ತಿಂಡಿಯನ್ನೋ ಊಟವನ್ನೋ ಮಾಡಿ ಹೋಗೋಣವೆಂದರೆ ತಲೆ ಮೇಲೆ ನೆರಳೂ ಇಲ್ಲ,ಕೂತು ಜಲಾಶಯದ ಸೌಂದರ್ಯವನ್ನು ನೋಡೋಣವೆಂದರೆ ಕಲ್ಲಿನ ಚಪ್ಪಡಿಯ ಆಸನಗಳು ಇಲ್ಲಿಲ್ಲ.ಅನೇಕರು ವಿದೇಶಗಳಿಗೆ ಹೋಗಿ ಸುಂದರ ತಾಣಗಳನ್ನು ನೋಡಿ ಹೊಗಳುತ್ತಾರೆ.ಅಂತಹ ತಾಣಗಳನ್ನು ನಿರ್ಮಿಸಲು ಅಲ್ಲಿಯ ಜನ ಮತ್ತು ಸರ್ಕಾರ ಎಷ್ಟು ಶ್ರಮ ಮತ್ತು ಶ್ರದ್ಡೆಯಿಂದ ಕಾರ್ಯ ನಿರ್ವಹಿಸುತ್ತಾರೆಂಬುದನ್ನು ಮರೆಯುತ್ತಾರೆ.ಎಷಾದರೂ ಈ ಜನಕ್ಕೆ ಹಿತ್ತಲ ಗಿಡ ಮದ್ದಲ್ಲ.
ಹೀಗೆ ಅಲಕ್ಷ್ಯಕ್ಕೀಡಾಗಿರುವ ಎಷ್ಟೋ ಪ್ರವಾಸಿ ತಾಣಗಳು ಪ್ರಯಾಸದ ತಾಣಗಳಾಗಿರುವುದನ್ನು ಎಲ್ಲೆಲ್ಲೂ ನೋಡಬಹುದಾಗಿದೆ.

1 comment:

surya prakash said...

ರಾಮನಗರ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳ ಬಗ್ಗೆ ನಿಮಗೆ ಚೆನ್ನಾಗಿ ಅರಿವಿದೆ ಗುರುಗಳೇ. ನೀವು ರಾಮನಗರ ಪ್ರವಾಸಿ ತಾಣಗಳ ವಿಕಿಪೀಡಿಯಾ!