Saturday, June 26, 2010

ಕಣ್ಮರೆಯಾದ ಚಿನ್ನದ ನಾಡು ಇಬ್ಬಳಿಕೆ ಗ್ರಾಮ






ರಾಮನಗರ-ಮಾಗಡಿ ಮಾರ್ಗದಲ್ಲಿ ಕೂಟಗಲ್ಲು ದಾಟಿ ಎರೆಹಳ್ಳಿಯಲ್ಲಿ ಬಲಕ್ಕೆ ತಿರುಗಿ ಜೋಗಿದೊಡ್ಡಿಗೆ ಹೋಗಿ ಅಲ್ಲಿಂದ ನೇರ ಹೋಗದೆ ಮತ್ತೆ ಬಲಕ್ಕೆ ಕಚ್ಚಾರಸ್ತೆಯಲ್ಲಿ ಸಾಗಿದರೆ ತಗ್ಗಾದ ಸಮತಟ್ಟು ಜಾಗದಲ್ಲಿ ಸಿಗುವ ಪ್ರದೇಶವೆ ಇಬ್ಬಳಿಕೆ ಹಳ್ಳಿಯ ಮರೆತು ಹೋಗಿರುವ ಪಾಳು ಸಾಮ್ರಾಜ್ಯ ಒಂದು ಕಾಲದಲ್ಲಿ ಸುಖ ಮತ್ತು ಸಮೃದ್ಧಿಯ ನಾಡಾಗಿದ್ದ ಇಬ್ಬಳಿಕೆ ಗ್ರಾಮ ಇವತ್ತಿಗೂ ಕಂದಾಯದ ದಾಖಲೆಯಲ್ಲಿದೆ.ಹಾಳು ಹಂಪೆಯ ರೀತಿಯಲ್ಲಿ ಚಿನ್ನವನ್ನು ಇಬ್ಬಳಿಗೆ(ಹತ್ತು ಸೇರಿನ ಅಳತೆ) ಅಳತೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆಂಬುದಕ್ಕೆ ಈಗಲೂ ಅಲ್ಲಿ ಸಿಗುತ್ತಿರುವ ಚಿನ್ನದ ನಾಣ್ಯಗಳೇ ಸಾಕ್ಷಿ.ಇಲ್ಲಿ ಸಿಗುವ ಅಥವ ಸಿಕ್ಕ ಚಿನ್ನದ ನಿಧಿಯಿಂದ ಚೆನ್ನಾಗಿ ಬಾಳಿದವರ ಅಥವ ಕೆಟ್ಟವರ ಕಥೆಗಳು ಈಗಲೂ ಪ್ರಚಲಿತದಲ್ಲಿವೆ.ನಾನು ಚಿಕ್ಕಂದಿನಲ್ಲಿ ತಾಯಿಯ ಜೊತೆ ಗುಂಗರಹಳ್ಳಿಯ ನೆಂಟರ ಮನೆಗೆ ಶಾರ್ಟ್ ಕಟ್ ದಾರಿಯಲ್ಲಿ ಹೋಗುತ್ತಿದ್ದಾಗ ಇಲ್ಲಿ ಸಿಗುತ್ತಿದ್ದ ಸೋಮೇಶ್ವರ ದೇವಾಲಯ, ಕಾಡು ಮಲ್ಲೇಶ್ವರ,ವೀರಭದ್ರ ಸ್ವಾಮಿ ದೇವಾಲಯಗಳನ್ನು ನೋಡಿದ ನೆನಪಿದೆ.ಹಸುರಾಗಿ ಗುಂಪು ಗುಂಪಾಗಿದ್ದ ತೋಪಿನಲ್ಲಿ ಸೋಮೇಶ್ವರ ದೇವಸ್ಥಾನದ ಮುಂದುಗಡೆ ಕೊಂಡದ ಹೊಂಡವನ್ನು ಮತ್ತು ವಿಶಾಲವಾದ ಕೊಳವನ್ನು ಗಮನಿಸಿದ್ದೆ.ವಿಶಾಲವಾದ ಬಯಲಿದ್ದ ಅಲ್ಲಿ ಸ್ವಲ್ಪ ಹೊತ್ತು ದೇವಸ್ಥಾನದ ಜಗಲಿಯ ಮೇಲೆ ಕೂತು ವಿಶ್ರಮಿಸಿಕೊಂಡು ಮುಂದಕ್ಕೆ ಅಳ್ಳಿಮಾರನಹಳ್ಳಿ- ಮೆಳೆಹಳ್ಳಿ ಮೂಲಕ ಗುಂಗರಹಳ್ಳಿಗೆ ಸಾಗುತ್ತಿದ್ದೆವು.
ನಾನು ಬಾಲ್ಯದಲ್ಲಿ ನೋಡುತ್ತಿದ್ದ ಎರೆಹಳ್ಳಿಗೆ ಹೋಗುವ ಮಾರ್ಗದಲ್ಲಿ ಹೊಲವೊಂದರಲ್ಲಿ ಅರಳಿ ಮರದ ಕೆಳಗೆ ನಿಲ್ಲಿಸಿದ್ದ ಶಾಸನವನ್ನು ಗಮನಿಸಿದ್ದೆ.ಮೈಸೂರಿನಲ್ಲಿ ಗಂಗೋತ್ರಿಯ ಗ್ರಂಥಾಲಯದಲ್ಲಿ ಕುತೂಹಲದಿಂದ ಎಪಿಗ್ರಾಫಿಯ ಕರ್ನಾಟಿಕಾವನ್ನು ಗಮನಿಸಿದಾಗ ಅದೊಂದು ದಾನಶಾಸನವೆಂದು ತಿಳಿದು ಬಂತು.ಪೀಳೇನಹಳ್ಳಿಯನ್ನು ಸೋಮೇಶ್ವರ ದೇವರಿಗೆ ದಾನಕೊಟ್ಟ ವಿಷಯ ಅದರಲ್ಲಿ ಪ್ರಸ್ತಾಪವಾಗಿತ್ತು.ನಮ್ಮ ಊರಾದ ಕೂಟಗಲ್ಲಿನ ಕೆಳಗಿನ ದಾರಿಯಲ್ಲಿ ಆಗಲೆ ಪಾಳು ಸ್ಥಿತಿಯಲ್ಲಿದ್ದ ಸೋಮೇಶ್ವರ ದೇವಾಲಯಕ್ಕೆ ದಾನವಾಗಿ ಕೊಟ್ಟಿರಬಹುದು ಎಂದುಕೊಂಡಿದ್ದೆ.ಈ ದೇವಾಲಯವನ್ನು ಚೋಳರು ರಾತ್ರೋರಾತ್ರಿ ಕಟ್ಟಿಸಿದರೆಂದು ಹಿರಿಯರು ಹೇಳುತ್ತಿದ್ದರು.ಆದರೆ ನಮ್ಮ ಶಾಸನ ತಜ್ಞರಾದ ಡಾ.ಎಂ.ಜಿ.ನಾಗರಾಜ್ ಅವರ ಲೇಖನವನ್ನು ಗಮನಿಸಿದಾಗ ಪಿಳೇನಹಳ್ಳಿ ಗ್ರಾಮವನ್ನು ಇಬ್ಬಳಿಕೆ ಹಳ್ಳಿಯ ಸೋಮೇಶ್ವರ ದೇವರಿಗೆ ದಾನವಾಗಿ ಕೊಟ್ಟಿರುವುದು ಎಂದು ವಿದಿತವಾಯಿತು.ಇಂದು ಕಾಣದಾಗಿರುವ ಪಿಳೇನಹಳ್ಳಿ(ಈಗಲೂ ಇದನ್ನು ಪಿಳ್ಳೇನಳ್ಳಿ ಮಾಳವೆಂದು ಕರೆಯುತ್ತಾರೆ) ಕೂಟಗಲ್ಲು ವ್ಯಾಪ್ತಿಗೆ ಸೇರಿದ್ದು ಸುಮಾರು ೫ ಕಿ.ಮೀ.ದೂರದಲ್ಲಿರುವ ಇಬ್ಬಳಿಕೆ ಗ್ರಾಮದ ದೇವರಿಗೆ ದಾನವಾಗಿ ಕೊಟ್ಟಿರುವುದೆಂದರೆ ಸೋಮೇಶ್ವರ ದೇವರ ಪ್ರಾಬಲ್ಯ ಮತ್ತು ವ್ಯಾಪಕತೆಯ ಅರಿವಾಗುತ್ತದೆ.
ಇಬ್ಬಳಿಕೆ ಹಳ್ಳಿಯ ಬಯಲಿನಲ್ಲಿ ಹರಡಿಹೋಗಿರುವ ದೇವಸ್ಥಾನಗಳ ಗುಚ್ಛವನ್ನು ಗಮನಿಸಿದಾಗ ಇವೆಲ್ಲ ಶೈವ ಪರಂಪರೆಗೆ ಸೇರಿದವೆಂಬುದು ವಿದಿತವಾಗುತ್ತದೆ.ಚೋಳರು ಶೈವರಾಗಿದ್ದು ಪ್ರಾಯಶಃ ಪ್ರಾಚೀನ ಶೈವ ದೇವಾಲಯಗಳೆಲ್ಲ ಅವರು ಈ ಪ್ರದೇಶವನ್ನು ಆಳುತ್ತಿದ್ದ ಸಂದರ್ಭದಲ್ಲಿ ಕಟ್ಟಿಸಿರಲೂ ಬಹುದು.ಇನ್ನೊಂದು ಇಲ್ಲಿಯ ವಿಶೇಷವೆಂದರೆ ಈ ಪ್ರದೇಶದಲ್ಲಿ ಒಂದೂ ವೈಷ್ಣವ ದೇವಾಲಯಗಳಿಲ್ಲದಿರುವುದು.
ಇಬ್ಬಳಿಕೆ ಗ್ರಾಮದ ಪ್ರದೇಶ ಸಮತಟ್ಟಾಗಿದ್ದು ಪಕ್ಕದಲ್ಲಿ ಹರಿಯುವ ತೊರೆ ಕೂಟಗಲ್ಲಿನ ಬಳಿ ಕಣ್ವ ನದಿಯನ್ನು ಸೇರುತ್ತದೆ.ಕೂಟಗಲ್ಲಿನ ಜನ ಅದನ್ನು ಹಳ್ಳವೆಂದು ಕರೆದರೂ ಮಳೆಗಾಲದಲ್ಲಿ ಎಷ್ಟೋ ವೇಳೆ ಅದು ಪ್ರವಾಹ ಬಂದಾಗ ಕಣ್ವ ನದಿಯಷ್ಟೇ ತುಂಬಿ ಹರಿಯುವುದನ್ನು ನೋಡಿದ್ದೇನೆ.ಎರೆಹಳ್ಳಿಯ ದಾರಿಯ ಸಮೀಪವೆ ಉದ್ದಕ್ಕೂ ಹರಿಯುವ ಈ ತೊರೆ ಪಿಳ್ಳೇನಹಳ್ಳಿ ಮಾಳದ ಎದುರಿನ ಗದ್ದೆ ಬಯಲಿನಲ್ಲಿ ವಿಶಾಲವಾದ ಹರಹಿನಲ್ಲಿ ಹರಿಯುತ್ತದೆ.ಅಂದರೆ ಈಗ ಕಣ್ಮರೆಯಾಗಿರುವ ಪಿಳ್ಳೇನಹಳ್ಳಿ ಮತ್ತು ಇಬ್ಬಳಿಕೆ ಹಳ್ಳಿ ಈ ತೊರೆಯ ದಂಡೆಯಲ್ಲೇ ಇದ್ದವು ಮತ್ತು ಇವೆರಡು ಗ್ರಾಮಗಳ ನಡುವೆ ಸಾಂಸ್ಕೃತಿಕ, ವ್ಯಾವಹಾರಿಕ ಸಂಬಂಧವಿತ್ತು ಎಂಬುದು ಗೊತ್ತಾಗುತ್ತದೆ.
ಅದೇ ರೀತಿ ಇಬ್ಬಳಿಕೆ ಹಳ್ಳಿಯ ಸಮೀಪವಿರುವ ಯತಿರಾಜರ ಬೆಟ್ಟ ಅಲ್ಲಿಯ ಐತಿಹ್ಯದ ಪ್ರಕಾರ ಮೂಲತಃ ಶೈವ ಪರಂಪರೆಗೆ ಸೇರಿದ್ದು ಸಿದ್ಢರು ಅಲ್ಲಿ ನೆಲೆಸಿದ್ದ್ರೆಂದೂ ಯತಿಯೊಬ್ಬ ತಪಸ್ಸು ಮಾಡಲು ಅಲ್ಲಿ ಸ್ಥಳಾವಕಾಶ ಕೋರಿದನೆಂದೂ ಕ್ರಮೇಣ ಆ ಪ್ರದೇಶವನ್ನೆಲ್ಲ ಆಕ್ರಮಿಸಿಕೊಳ್ಳಲು ಪ್ರಯತ್ನಿಸಿದಾಗ ಸಿದ್ಡರು ಒಪ್ಪಲಿಲ್ಲ.ಆಗ ಅವರನ್ನು ವಿಶ್ವರೂಪ ದರ್ಶನ ತೋರಿಸಿ ಹೆದರಿಸಿ ಅವರನ್ನು ಚನ್ನಪಟ್ಟಣದ ಸಿದ್ಧರ ಬೆಟ್ಟಕ್ಕೆ ಅಟ್ಟಿದನೆಂದೂ ತಿಳಿದುಬರುತ್ತದೆ.ಈಗಲೂ ಯತಿರಾಜರ ಬೆಟ್ಟದ ಮೇಲೆ ಗುಹೆಯಾಕೃತಿಯ ದೇವಾಲಯದಲ್ಲಿ ಯತಿಯ(ಪ್ರಾಯಶಃ ರಾಮಾನುಜಾಚಾರ್ಯರ) ಪ್ರತಿಮೆ ಇದ್ದು ಪೂಜೆಗೊಳ್ಳುತ್ತಿದೆ. ಯತಿರಾಜರ ಬೆಟ್ಟಕ್ಕೂ ಇಬ್ಬಳಿಕೆ ಹಳ್ಳಿಗೂ ಧಾರ್ಮಿಕ ಹಾಗೂ ಸಾಮಾಜಿಕ ಸಂಬಂಧವಿತ್ತೆಂದೂ ಹೇಳುತ್ತಾರೆ.ಯತಿರಾಜರ ಬೆಟ್ಟದ ಕಾಮಧೇನು ಇಬ್ಬಳಿಕೆ ಹಳ್ಳಿಯ ಹೊಲಮಾಳದಲ್ಲಿ ಮೇಯುತ್ತಿತ್ತೆಂದೂ ಅದನ್ನು ರಾತ್ರಿವೇಳೆ ದಲಿತನೊಬ್ಬ ನೋಡಿದನೆಂದೂ ಈ ವಿಷಯವನ್ನು ಯಾರಿಗೂ ಹೇಳಬಾರದೆಂದು ಕಟ್ಟಪ್ಪಣೆ ಮಾಡಿ ಹೇರಳವಾಗಿ ಸಂಪತ್ತನ್ನು ಅನುಗ್ರಹಿಸಿ ಒಂದು ಪಕ್ಷ ಬಾಯಿ ಬಿಟ್ಟರೆ ಆ ಸಂಪತ್ತು ನಾಶವಾಗುವುದೆಂದು ಎಚ್ಚರಿಸಿ ಮಾಯವಾಯಿತೆಂದು ಐತಿಹ್ಯವಿದೆ.ಕಾಲಕ್ರಮೇಣ ಸತ್ಯವನ್ನು ಮುಚ್ಚಿಡಲಾಗದೆ ಹೇಳಿಬಿಟ್ಟನೆಂದೂ ಅವನ ಸಂಪತ್ತೆಲ್ಲಾ ನಾಶವಾಯಿತೆಂದು ಹೇಳುತ್ತಾರೆ.
ರಾಮನಗರದ ಅರ್ಕೇಶ್ವರ ದೇವಸ್ಥಾನ ನಿರ್ಮಾಣ ಮಾಡಿದ ಭಕ್ಷಿ ಬಾಲಾಜಿರಾಯರು ಇಬ್ಬಳಿಕೆ ಹಳ್ಳಿಯ ಸೋಮೇಶ್ವರ ದೇವಸ್ಥಾನದಿಂದ ಮೂಲ ಸೋಮೇಶ್ವರ ಲಿಂಗವನ್ನು ತಂದು ಪ್ರತಿಷ್ಠಾಪನೆ ಮಾಡಿದರೆಂದು ಹೇಳುತ್ತಾರೆ.ಅಂದರೆ ಹದಿನೆಂಟನೆ ಶತಮಾನದವರೆಗೂ ಇಬ್ಬಳಿಕೆ ಹಳ್ಳಿ ನಾಶವಾಗಿದ್ದರೂ ದೇವಸ್ಥಾನ ಸುಸ್ಥಿತಿಯಲ್ಲಿತ್ತೆಂದು ಇದರಿಂದ ವಿದಿತವಾಗುತ್ತದೆ.
ಶೈವ ಸಂಸ್ಕೃತಿಯ ನೆಲೆವೀಡಾಗಿದ್ದ ಇಬ್ಬಳಿಕೆ ಹಳ್ಳಿ ನಾಶವಾಗಲು ಈ ಕೆಳ ಕಂಡ ಕಾರಣಗಳಲ್ಲಿ ಯಾವುದಾದರೂ ಒಂದಿರಬಹುದು ಎಂದು ನನಗನ್ನಿಸುತ್ತದೆ.
೧)ತೊರೆಯ ಸಮತಟ್ಟಾದ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದ ಕಾರಣದಿಂದ ಪ್ರವಾಹ ಬಂದು ಗ್ರಾಮ ನಾಶವಾಗಿರಬಹುದು.
೨)ಶೈವ ಮತ್ತು ವೈಷ್ಣವ ಪಂಥಗಳ ಸಂಘರ್ಷದಿಂದ ಈ ಊರು ನಾಶವಾಗಿರಬಹುದು.
೩)ಪ್ಲೇಗ್ ನಂಥ ಮಹಾಮಾರಿಗೆ ತುತ್ತಾಗಿ ಜನ ಖಾಲಿ ಮಾಡಿರಬಹುದು.
೪)ಇಬ್ಬಳಿಕೆ ಗ್ರಾಮ ಸಂಪತ್ಭರಿತವಾದ ಪ್ರಾಯಶಃ ಚಿನ್ನದಿಂದ ಸಮೃದ್ಧವಾಗಿದ್ದ ಪ್ರಮುಖ ವ್ಯಾಪಾರ ಕೇಂದ್ರವೂ ಆಗಿದ್ದರಿಂದ ಕಳ್ಳ ಕಾಕರ ಅಥವ ದರೋಡೆಕೋರರ ಧಾಳಿಯಿಂದಲೂ ನಾಶವಾಗಿರಬಹುದು.
ಇಬ್ಬಳಿಕೆ ಹಳ್ಳಿಯ ಪ್ರದೇಶದಲ್ಲಿ ಪಳೆಯುಳಿಕೆಗಳು ಶಾಸನಗಳು ಈಗಲೂ ಇವೆ.ಇಡೀ ಪ್ರದೇಶವನ್ನು ಉತ್ಖನನ ಮಾಡಿ ಸಂಶೋಧನೆ ಮಾಡಿದರೆ ಹೆಚ್ಚಿನ ವಿಷಯಗಳು ಲಭ್ಯವಾಗುತ್ತವೆ.
ಜೊತೆಗೆ ಪ್ರವಾಸೋದ್ಯಮ ಇಲಾಖೆ ಇತ್ತ ಕಡೆ ಗಮನ ಹರಿಸಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಂಡು ಉಳಿದಿರುವ ದೇಗುಲಗಳ ಜೊತೆಗೆ ಅವಶೇಷಗಳೊಡನೆ ಇನ್ನೂ ಇರುವ ಚಾರಿತ್ರಿಕ ಸೋಮೇಶ್ವರ ದೇವಸ್ಥಾನವನ್ನು ಪುನರ್ ನಿರ್ಮಿಸಿದರೆ ಒಂದು ಆಕರ್ಷಕ ಪ್ರವಾಸಿ ತಾಣವೂ ಅಗುತ್ತದೆ.

No comments: