Saturday, September 19, 2009

ಈ ಮರಗಳಿಗೆ ದೇವರೇ ದಿಕ್ಕು .


ಲಕ್ಷ್ಮಿಪುರದ ಸಮೀಪದ ಗುಂಗರಹಳ್ಳಿಯ ಮಿತ್ರ ಮಹೇಶ ಅವರು ಮನೆಗೆ ಬಂದಿದ್ದ ಸಂದರ್ಭದಲ್ಲಿ ರಾಮನಗರ ತಾಲ್ಲೂಕಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳನ್ನು ಕುರಿತು ಮಾತಾಡುತ್ತಿದ್ದಾಗ ಅವರು ತಮ್ಮ ಊರಿನ ಮೇಲಿನ ಅಭಿಮಾನದಿಂದ ಲಕ್ಷ್ಮಿಪುರದ ಬಳಿ ದೊಡ್ಡಾಲದ ಮರ ಇರುವ ವಿಷಯ ತಿಳಿಸಿದರು.ಕೆಂಗೇರಿಯ ಸಮೀಪದ ಎಕರೆಗಟ್ಟಲೆ ಆವರಿಸಿರುವ ದೊಡ್ಡಾಲದ ಮರವನ್ನು ನೋಡಿದ್ದ ನಾನು ಅವರ ಮಾತನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.ಆದರೂ ಮನಸ್ಸಿನ ಮೂಲೆಯಲ್ಲಿ ಅದನ್ನು ನೋಡುವ ಕುತೂಹಲ ಇದ್ದೇ ಇತ್ತು.ಒಂದು ದಿನ ಭಾನುವಾರ ಇದ್ದಕ್ಕಿದ್ದಂತೆ ನಾನು ಮತ್ತು ನನ್ನ ಪತ್ನಿ ಬಿ.ಎಲ್.ಸರೋಜಮ್ಮ ಪಲ್ಸರ್ ಗಾಡಿ ತೆಗೆದುಕೊಂಡು ಹೊರಟೇಬಿಟ್ಟೆವು.ನಾವು ದೊಡ್ಡಾಲದ ಮರಕ್ಕೆ ಹೋಗುವ ಸಂದರ್ಭದಲ್ಲಿ ನಮ್ಮೊಡನೆ ಬರುತ್ತೇನೆಂದು ಮಹೇಶ್ ಹೇಳಿದ್ದರಿಂದ ಗುಂಗರಹಳ್ಳಿಗೆ ಮೊದಲು ಹೋದೆವು.ಆದರೆ ಮಹೇಶ್ ಅಲ್ಲಿರಲಿಲ್ಲ.ನಾಗಮಂಗಲಕ್ಕೆ ನಾಲಗೆಯೇ ದಾರಿ ಅಂದುಕೊಂಡು ನಾವಿಬ್ಬರೇ ಹೊರಟೆವು.ಅಲ್ಲಿಗೆ ತಲುಪಿದಾಗ ಸುಮಾರು ೨ ಗಂಟೆ ಇರಬಹುದು.ಊಟ ಮಾಡಿರಲಿಲ್ಲವಾದ್ದರಿಂದ ಲಕ್ಷ್ಮಿಪುರದಲ್ಲಿ ಬಾಳೆ ಹಣ್ಣು ಬಿಸ್ಕೆಟ್ಟು ತೆಗೆದುಕೊಂಡೆವು.ಊಟಕ್ಕೆ ಅಲ್ಲಿ ಯಾವುದೇ ಹೊಟೆಲ್ಲು ಕೂಡ ಇರಲಿಲ್ಲ.
ರಾಮನಗರದಿಂದ ಮಾಗಡಿಗೆ ಹೋಗುವ ಮಾರ್ಗದಲ್ಲಿ ಲಕ್ಷ್ಮಿಪುರ ಸಿಕ್ಕುತ್ತದೆ.ಲಕ್ಷ್ಮಿಪುರವನ್ನು ಪ್ರವೇಶಿಸುವ ಮುಖ್ಯ ರಸ್ತೆಯಿಂದ ಎಡಕ್ಕೆ ಜೂನಿಯರ್ ಕಾಲೇಜಿಗೆ ಹೋಗುವ ದಾರಿಯಲ್ಲಿ ಸುಮಾರು ೩ ಕಿ.ಮೀ ಕಾಡು ಹಾದಿಯಲ್ಲಿ ಸಾಗಿ ಒಂದು ತಗ್ಗಾದ ಕಡೆ ಬಲಭಾಗದಲ್ಲಿ ಮರಗಳ ಗುಂಪು ಗೋಚರಿಸುತ್ತದೆ.ಸುತ್ತ ಮುತ್ತ ಮಾವಿನ ಮರಗಳೇ ಹೆಚ್ಚಾಗಿರುವುದರಿಂದ ಸ್ವಲ್ಪ ಎಚ್ಚರಿಕೆಯಿಂದ ಗಮನಿಸಬೇಕು.ಇಲ್ಲವೇ ದಾರಿಯಲ್ಲಿ ಯಾರಾದರೂ ಸಿಕ್ಕಿದರೆ ವಿಚಾರಿಸಿದರೂ ಸರಿ.ಮಾವಿನ ಮರಗಳೇ ಹೆಚ್ಚಾಗಿರುವ ಗುಂಪಿನ ಮಧ್ಯೆ ಕಾಲು ದಾರಿಯಲ್ಲಿ ಹಾದು ಹೋದರೆ ದೊಡ್ಡಾಲದ ಮರ ಸಿಕ್ಕುತ್ತದೆ.
ಕೆಂಗೇರಿ ಸಮೀಪದ ದೊಡ್ಡಾಲದ ಮರದ ಅರ್ಧದಷ್ಟೊ ಕಾಲು ಭಾಗದಷ್ಟೋ ಇರುವ ಈ ದೊಡ್ಡಾಲದ ಮರ ಒಂದು ರೀತಿಯಲ್ಲಿ ನಿರ್ಜನ ಪ್ರದೇಶದಲ್ಲಿದೆ.
ಸುಮಾರು ಪ್ರದೇಶ ಈಗಾಗಲೆ ಒತ್ತುವರಿಯಾಗಿದೆ.ನಾನು ಗಮನಿಸಿದ ಪ್ರಕಾರ ಈ ದೊಡ್ಡಾಲದ ಮರ ಇಷ್ಟೊತ್ತಿಗಾಗಲೆ ಮಾಯವಾಗಬೇಕಾಗಿತ್ತು.ಆ ರೀತಿ ಒತ್ತರಿಸಿಕೊಳ್ಳುವ ದುರಾಸೆಯ ಒತ್ತಡವನ್ನು ಸಹಿಸಿಕೊಂಡೇ ಅದು ಇನ್ನೂ ಬದುಕಿದೆ.
ನಾನು ಸ್ವತಹ ಆಸ್ತಿಕನಲ್ಲದಿದ್ದರೂ ದೇವರ ಭಯ ನಮ್ಮ ಪರಿಸರವನ್ನು ಹೇಗೆ ಕಾಪಾಡುತ್ತದೆ ಎಂಬುದು ಅರಿವಿಗೆ ಬಂದದ್ದು ಇಲ್ಲಿಯೆ. ಮನುಷ್ಯ ಇವೊತ್ತು ಶುದ್ಡವಾದ ನೀರಿಲ್ಲದೆ,ಗಾಳಿಯಿಲ್ಲದೆ ಬದುಕುತ್ತಿದ್ದಾನೆ.ನಿನ್ನೆ ತಾನೆ ಟಿ.ವಿ.ಯಲ್ಲಿ ಕೋಲಾರದ ಹಳ್ಳಿಗಳಲ್ಲಿ ಕೊಳವೆ ಬಾವಿಗಳ ನೀರಿನಲ್ಲಿ ಹೆಚ್ಚಾದ ಕ್ಯಾಲ್ಸಿಯಂ,ಫ್ಲೂರೈಡ್ ಹಾಗೂ ನೈಟ್ರೇಟ್ ಗಳಿಂದ ಕಲುಷಿತವಾಗಿರುದನ್ನು,ಇದರಿಂದ ಅಂಗವೈಕಲ್ಯವೇ ಮುಂತಾದ ರೋಗಗಳಿಂದ ಜನ ಬಳಲುತ್ತಿರುವುದನ್ನೂ ವೈದ್ಯರು ಹಾಗೂ ಜನಸಾಮಾನ್ಯರು ಗಮನಿಸಿರುವ ವಿಷಯ ಪ್ರಸಾರವಾಗಿದೆ.
ಎಂಥಹ ಅಸಹಾಯಕ ಸ್ಥಿತಿ!
ಅವರಿಗೆ ಕೊಳವೆ ನೀರನ್ನು ಬಿಟ್ಟು ಬೇರೆ ಜಲಮೂಲಗಳೇ ಇಲ್ಲ.ಹಾಗಾಗಿ ಅನಿವಾರ್ಯವಾಗಿ ಅವರು ಅದೇ ನೀರನ್ನೆ ಕುಡಿಯಬೇಕಾಗಿದೆ.ಕುಡಿದು ಬದುಕುವಂತೆಯೂ ಇಲ್ಲ .ಕುಡಿಯದೆಯೂ ಇರುವಂತಿಲ್ಲ. ಇಂತಹ ಸ್ಥಿತಿಯಲ್ಲಿ ಶುದ್ಡವಾದ ನೀರು ಆರೋಗ್ಯವಂತ ಬದುಕಿಗೆ ಅನಿವಾರ್ಯವಾಗಿದೆ.
ದೊಡ್ಡಾಲದ ಮರದ ಮಧ್ಯೆ ಒಂದು ದೇವರ ಗುಡಿ ಇದೆ.ಅಲ್ಲಿ ನಿತ್ಯ ಪೂಜೆ ನಡೆಯುತ್ತದೋ ಇಲ್ಲವೋ ಗೊತ್ತಿಲ್ಲ.ಆದರೆ ಆ ದೇವರೆ ಅಲ್ಲಿಯ ಪರಿಸರದ ಸಂರಕ್ಷಕನಾಗಿದ್ದಾನೆ.ಆ ಗುಡಿಯನ್ನು ಏಕಾಂಗಿಯನ್ನಾಗಿ ಮಾಡಿ ಪೂರ್ತಿ ತೋಪನ್ನು ಒತ್ತರಿಸಿಕೊಳ್ಳಲು ಯಾರಿಗೂ ಧೈರ್ಯ ಬಂದಿಲ್ಲ.ಒಂದು ಭಯ ಭಕ್ತಿಯ ವಾತಾವರರಣ ಅಲ್ಲಿ ನಿರ್ಮಾಣವಾಗಿದೆ.ಅಲ್ಲಿ ಕೇವಲ ದೊಡ್ಡಾಲದ ಮರ ಮಾತ್ರವಲ್ಲ ಬೇರೆ ಬೇರೆ ಜಾತಿಯ ಮರಗಳೂ ಅಲ್ಲಿವೆ.ಒಂದು ಚಿಕ್ಕ ಕೊಳವನ್ನೂ ಮಾಡಿರುವುದರಿಂದ ಹೊಂಡಕ್ಕೆ ವಿವಿಧ ಬಗೆಯ ಪಕ್ಷಿಗಳು ನೀರು ಕುಡಿಯಲು ಮತ್ತು ತಂಗಲು ಅಲ್ಲಿಗೆ ಬರುತ್ತವೆ.ಹೀಗಾಗಿ ಪಕ್ಷಿವೀಕ್ಷಕರಿಗೂ ಇದು ಆಕರ್ಷಕ ತಾಣವಾಗಿದೆ.
ನಾವು ಹೊತ್ತು ಕಂತುವವರೆಗೂ ಅಲ್ಲಿಯೆ ಕಾಲ ಕಳೆದೆವು.ಕೊಂಡೊಯ್ದಿದ್ದ ಬಿಸ್ಕೆಟ್ ಬಾಳೆಹಣ್ಣುಗಳನ್ನು ಹೊಟ್ಟೆ ಹಸಿದಿದ್ದರಿಂದ ಸವಿದೆವೆಂದೇ ಹೇಳಬೇಕು.ಹೊಟ್ಟೆ ಹಸಿದಿದ್ದಾಗ ಸಿಕ್ಕ ಆಹಾರವೆಲ್ಲ ಸವಿಯೇ ಅಲ್ಲವೆ?
ಪ್ರಚಾರವಿಲ್ಲದೆ ತಂತಾನೆ ಬೆಳೆಯುತ್ತ ಪಕ್ಷಿ ಮತ್ತು ಪ್ರಾಣಿಗಳಿಗೆ ಆಶ್ರಯವಾಗಿ ಪರಿಸರಕ್ಕೆ ತನ್ನದೇ ಕಾಣಿಕೆ ನೀಡುತ್ತಿರುವ ಈ ದೊಡ್ಡಾಲದ ಮರ ಮತ್ತು ಅದನ್ನು ಕಾಪಾಡುತ್ತಿರುವ ದೈವಭಕ್ತಿಗೋ ಭಯಕ್ಕೋ ನಮೋ ಎನ್ನೋಣವೆ?

1 comment:

surya prakash said...

ಬೃಹತ್ ಆಲದ ಮರ ರಾಮನಗರಕ್ಕೆ ಇಷ್ಟು ಹತ್ತಿರವಿದ್ದು, ಅದೇನೋ ಅಲ್ಲಿಗೆ ಭೇಟಿ ನೀಡಲಾಗಲೇ ಇಲ್ಲ. ನಿಮ್ಮ ಬರಹ ಅಲ್ಲಿಗೆ ಹೋಗುವಂತೆ ‌ಪ್ರೇರೇಪಿಸುತ್ತಿದೆ. ಇಷ್ಟರಲ್ಲೇ ಅಲ್ಲಿಗೊಂದು ವಿಸಿಟ್ ನೀಡುತ್ತೇನೆ.

ಬಿ.ವಿ.ಸೂರ್ಯ ಪ್ರಕಾಶ್, ರಾಮನಗರ