Tuesday, October 12, 2010

ಬಾರಯ್ಯ ನನ್ನೂರಿಗೆ






ನಾನು ಹಿಂದೆ ಬರೆದಿದ್ದ ಬಾರಯ್ಯ ನನ್ನೂರಿಗೆ ಕವನವನ್ನು ಕೆಳಗೆ ಕೊಟ್ಟಿದ್ದೇನೆ.ಅದರ ಸೌಂದರ್ಯದ ವಿವಿಧ ಮುಖಗಳ ಚಿತ್ರಾವಳಿಯೂ ಇಲ್ಲಿದೆ.ಶಬ್ದ ಚಿತ್ರ ಮತ್ತು ದೃಶ್ಯಚಿತ್ರಗಳ ಸಂಗಮ ಇಲ್ಲಿದೆ.ಅನುಭವದ ಮೂಲ ಮತ್ತು ಮತ್ತು ಅಭಿವ್ಯಕ್ತಿಯ ಕೌಶಲವನ್ನು ಕವಿಗಳು ಮತ್ತು ಕವಿಮನಸ್ಸಿಗೆ ಲಗ್ಗೆ ಹಾಕಬಲ್ಲ ಸಹೃದಯರು ಇಲ್ಲಿ ಅನುಸಂಧಾನ ಮಾಡಿಕೊಳ್ಳಬಹುದಾಗಿದೆ.
ಯಾರಯ್ಯ ನೀನು ದಾರಿಲಿ ಹೋಗುವವ!
ಬಾರಯ್ಯ ನನ್ನೂರಿಗೆ

ನನ್ನೂರ ಕೆರೆಯು ತುಂಬಿ ತುಳುಕುವುದು
ತೆಂಗಿನ ಸಾಲು ತೇಪಾಡುವುದು:
ಕಣಿವೆಯ ದಾರಿಯ ಕಿರುದಾರಿಯ ಹಿಡಿದು
ಬಾರಯ್ಯ ನನ್ನೂರಿಗೆ.

ಸುತ್ತಮುತ್ತಲು ಕೋಟೆ ದುಪ್ಪಟಿ ಸುತ್ತಿದೆ ಮೋಡ
ಬೆಚ್ಚಗೆ ಮಲಗಿದೆ ಕೂಟಗಲ್ಲು
ಕಣ್ವೆಯ ಕಣ್ಣಿನ ಮಿಂಚಿನೆಳೆಯ ಹಿಡಿದು
ಬಾರಯ್ಯ ನನ್ನೂರಿಗೆ

ಅಗೆದರೆ ಕಾರಂಜಿ ನೆಲವೆಲ್ಲ ಅಪರಂಜಿ
ಮೈಯೆಲ್ಲ ಹಸುರಂಗಿ ನನ್ನೂರಿಗೆ
ಸ್ವಾಮಿ ತಿಮ್ಮಪ್ಪನ ಸನ್ನಿಧಿ ಬಳಿ ಇರುವ
ಗಳಗ್ಗಲ್ಲ ಮೋಡಿ ನೋಡಿ
ಬಾರಯ್ಯ ನನ್ನೂರಿಗೆ.

ಬೆಡಗು: Nisarga bareda shilaa kaavya

ಬೆಡಗು: Nisarga bareda shilaa kaavya

Saturday, June 26, 2010

ಕಣ್ಮರೆಯಾದ ಚಿನ್ನದ ನಾಡು ಇಬ್ಬಳಿಕೆ ಗ್ರಾಮ






ರಾಮನಗರ-ಮಾಗಡಿ ಮಾರ್ಗದಲ್ಲಿ ಕೂಟಗಲ್ಲು ದಾಟಿ ಎರೆಹಳ್ಳಿಯಲ್ಲಿ ಬಲಕ್ಕೆ ತಿರುಗಿ ಜೋಗಿದೊಡ್ಡಿಗೆ ಹೋಗಿ ಅಲ್ಲಿಂದ ನೇರ ಹೋಗದೆ ಮತ್ತೆ ಬಲಕ್ಕೆ ಕಚ್ಚಾರಸ್ತೆಯಲ್ಲಿ ಸಾಗಿದರೆ ತಗ್ಗಾದ ಸಮತಟ್ಟು ಜಾಗದಲ್ಲಿ ಸಿಗುವ ಪ್ರದೇಶವೆ ಇಬ್ಬಳಿಕೆ ಹಳ್ಳಿಯ ಮರೆತು ಹೋಗಿರುವ ಪಾಳು ಸಾಮ್ರಾಜ್ಯ ಒಂದು ಕಾಲದಲ್ಲಿ ಸುಖ ಮತ್ತು ಸಮೃದ್ಧಿಯ ನಾಡಾಗಿದ್ದ ಇಬ್ಬಳಿಕೆ ಗ್ರಾಮ ಇವತ್ತಿಗೂ ಕಂದಾಯದ ದಾಖಲೆಯಲ್ಲಿದೆ.ಹಾಳು ಹಂಪೆಯ ರೀತಿಯಲ್ಲಿ ಚಿನ್ನವನ್ನು ಇಬ್ಬಳಿಗೆ(ಹತ್ತು ಸೇರಿನ ಅಳತೆ) ಅಳತೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆಂಬುದಕ್ಕೆ ಈಗಲೂ ಅಲ್ಲಿ ಸಿಗುತ್ತಿರುವ ಚಿನ್ನದ ನಾಣ್ಯಗಳೇ ಸಾಕ್ಷಿ.ಇಲ್ಲಿ ಸಿಗುವ ಅಥವ ಸಿಕ್ಕ ಚಿನ್ನದ ನಿಧಿಯಿಂದ ಚೆನ್ನಾಗಿ ಬಾಳಿದವರ ಅಥವ ಕೆಟ್ಟವರ ಕಥೆಗಳು ಈಗಲೂ ಪ್ರಚಲಿತದಲ್ಲಿವೆ.ನಾನು ಚಿಕ್ಕಂದಿನಲ್ಲಿ ತಾಯಿಯ ಜೊತೆ ಗುಂಗರಹಳ್ಳಿಯ ನೆಂಟರ ಮನೆಗೆ ಶಾರ್ಟ್ ಕಟ್ ದಾರಿಯಲ್ಲಿ ಹೋಗುತ್ತಿದ್ದಾಗ ಇಲ್ಲಿ ಸಿಗುತ್ತಿದ್ದ ಸೋಮೇಶ್ವರ ದೇವಾಲಯ, ಕಾಡು ಮಲ್ಲೇಶ್ವರ,ವೀರಭದ್ರ ಸ್ವಾಮಿ ದೇವಾಲಯಗಳನ್ನು ನೋಡಿದ ನೆನಪಿದೆ.ಹಸುರಾಗಿ ಗುಂಪು ಗುಂಪಾಗಿದ್ದ ತೋಪಿನಲ್ಲಿ ಸೋಮೇಶ್ವರ ದೇವಸ್ಥಾನದ ಮುಂದುಗಡೆ ಕೊಂಡದ ಹೊಂಡವನ್ನು ಮತ್ತು ವಿಶಾಲವಾದ ಕೊಳವನ್ನು ಗಮನಿಸಿದ್ದೆ.ವಿಶಾಲವಾದ ಬಯಲಿದ್ದ ಅಲ್ಲಿ ಸ್ವಲ್ಪ ಹೊತ್ತು ದೇವಸ್ಥಾನದ ಜಗಲಿಯ ಮೇಲೆ ಕೂತು ವಿಶ್ರಮಿಸಿಕೊಂಡು ಮುಂದಕ್ಕೆ ಅಳ್ಳಿಮಾರನಹಳ್ಳಿ- ಮೆಳೆಹಳ್ಳಿ ಮೂಲಕ ಗುಂಗರಹಳ್ಳಿಗೆ ಸಾಗುತ್ತಿದ್ದೆವು.
ನಾನು ಬಾಲ್ಯದಲ್ಲಿ ನೋಡುತ್ತಿದ್ದ ಎರೆಹಳ್ಳಿಗೆ ಹೋಗುವ ಮಾರ್ಗದಲ್ಲಿ ಹೊಲವೊಂದರಲ್ಲಿ ಅರಳಿ ಮರದ ಕೆಳಗೆ ನಿಲ್ಲಿಸಿದ್ದ ಶಾಸನವನ್ನು ಗಮನಿಸಿದ್ದೆ.ಮೈಸೂರಿನಲ್ಲಿ ಗಂಗೋತ್ರಿಯ ಗ್ರಂಥಾಲಯದಲ್ಲಿ ಕುತೂಹಲದಿಂದ ಎಪಿಗ್ರಾಫಿಯ ಕರ್ನಾಟಿಕಾವನ್ನು ಗಮನಿಸಿದಾಗ ಅದೊಂದು ದಾನಶಾಸನವೆಂದು ತಿಳಿದು ಬಂತು.ಪೀಳೇನಹಳ್ಳಿಯನ್ನು ಸೋಮೇಶ್ವರ ದೇವರಿಗೆ ದಾನಕೊಟ್ಟ ವಿಷಯ ಅದರಲ್ಲಿ ಪ್ರಸ್ತಾಪವಾಗಿತ್ತು.ನಮ್ಮ ಊರಾದ ಕೂಟಗಲ್ಲಿನ ಕೆಳಗಿನ ದಾರಿಯಲ್ಲಿ ಆಗಲೆ ಪಾಳು ಸ್ಥಿತಿಯಲ್ಲಿದ್ದ ಸೋಮೇಶ್ವರ ದೇವಾಲಯಕ್ಕೆ ದಾನವಾಗಿ ಕೊಟ್ಟಿರಬಹುದು ಎಂದುಕೊಂಡಿದ್ದೆ.ಈ ದೇವಾಲಯವನ್ನು ಚೋಳರು ರಾತ್ರೋರಾತ್ರಿ ಕಟ್ಟಿಸಿದರೆಂದು ಹಿರಿಯರು ಹೇಳುತ್ತಿದ್ದರು.ಆದರೆ ನಮ್ಮ ಶಾಸನ ತಜ್ಞರಾದ ಡಾ.ಎಂ.ಜಿ.ನಾಗರಾಜ್ ಅವರ ಲೇಖನವನ್ನು ಗಮನಿಸಿದಾಗ ಪಿಳೇನಹಳ್ಳಿ ಗ್ರಾಮವನ್ನು ಇಬ್ಬಳಿಕೆ ಹಳ್ಳಿಯ ಸೋಮೇಶ್ವರ ದೇವರಿಗೆ ದಾನವಾಗಿ ಕೊಟ್ಟಿರುವುದು ಎಂದು ವಿದಿತವಾಯಿತು.ಇಂದು ಕಾಣದಾಗಿರುವ ಪಿಳೇನಹಳ್ಳಿ(ಈಗಲೂ ಇದನ್ನು ಪಿಳ್ಳೇನಳ್ಳಿ ಮಾಳವೆಂದು ಕರೆಯುತ್ತಾರೆ) ಕೂಟಗಲ್ಲು ವ್ಯಾಪ್ತಿಗೆ ಸೇರಿದ್ದು ಸುಮಾರು ೫ ಕಿ.ಮೀ.ದೂರದಲ್ಲಿರುವ ಇಬ್ಬಳಿಕೆ ಗ್ರಾಮದ ದೇವರಿಗೆ ದಾನವಾಗಿ ಕೊಟ್ಟಿರುವುದೆಂದರೆ ಸೋಮೇಶ್ವರ ದೇವರ ಪ್ರಾಬಲ್ಯ ಮತ್ತು ವ್ಯಾಪಕತೆಯ ಅರಿವಾಗುತ್ತದೆ.
ಇಬ್ಬಳಿಕೆ ಹಳ್ಳಿಯ ಬಯಲಿನಲ್ಲಿ ಹರಡಿಹೋಗಿರುವ ದೇವಸ್ಥಾನಗಳ ಗುಚ್ಛವನ್ನು ಗಮನಿಸಿದಾಗ ಇವೆಲ್ಲ ಶೈವ ಪರಂಪರೆಗೆ ಸೇರಿದವೆಂಬುದು ವಿದಿತವಾಗುತ್ತದೆ.ಚೋಳರು ಶೈವರಾಗಿದ್ದು ಪ್ರಾಯಶಃ ಪ್ರಾಚೀನ ಶೈವ ದೇವಾಲಯಗಳೆಲ್ಲ ಅವರು ಈ ಪ್ರದೇಶವನ್ನು ಆಳುತ್ತಿದ್ದ ಸಂದರ್ಭದಲ್ಲಿ ಕಟ್ಟಿಸಿರಲೂ ಬಹುದು.ಇನ್ನೊಂದು ಇಲ್ಲಿಯ ವಿಶೇಷವೆಂದರೆ ಈ ಪ್ರದೇಶದಲ್ಲಿ ಒಂದೂ ವೈಷ್ಣವ ದೇವಾಲಯಗಳಿಲ್ಲದಿರುವುದು.
ಇಬ್ಬಳಿಕೆ ಗ್ರಾಮದ ಪ್ರದೇಶ ಸಮತಟ್ಟಾಗಿದ್ದು ಪಕ್ಕದಲ್ಲಿ ಹರಿಯುವ ತೊರೆ ಕೂಟಗಲ್ಲಿನ ಬಳಿ ಕಣ್ವ ನದಿಯನ್ನು ಸೇರುತ್ತದೆ.ಕೂಟಗಲ್ಲಿನ ಜನ ಅದನ್ನು ಹಳ್ಳವೆಂದು ಕರೆದರೂ ಮಳೆಗಾಲದಲ್ಲಿ ಎಷ್ಟೋ ವೇಳೆ ಅದು ಪ್ರವಾಹ ಬಂದಾಗ ಕಣ್ವ ನದಿಯಷ್ಟೇ ತುಂಬಿ ಹರಿಯುವುದನ್ನು ನೋಡಿದ್ದೇನೆ.ಎರೆಹಳ್ಳಿಯ ದಾರಿಯ ಸಮೀಪವೆ ಉದ್ದಕ್ಕೂ ಹರಿಯುವ ಈ ತೊರೆ ಪಿಳ್ಳೇನಹಳ್ಳಿ ಮಾಳದ ಎದುರಿನ ಗದ್ದೆ ಬಯಲಿನಲ್ಲಿ ವಿಶಾಲವಾದ ಹರಹಿನಲ್ಲಿ ಹರಿಯುತ್ತದೆ.ಅಂದರೆ ಈಗ ಕಣ್ಮರೆಯಾಗಿರುವ ಪಿಳ್ಳೇನಹಳ್ಳಿ ಮತ್ತು ಇಬ್ಬಳಿಕೆ ಹಳ್ಳಿ ಈ ತೊರೆಯ ದಂಡೆಯಲ್ಲೇ ಇದ್ದವು ಮತ್ತು ಇವೆರಡು ಗ್ರಾಮಗಳ ನಡುವೆ ಸಾಂಸ್ಕೃತಿಕ, ವ್ಯಾವಹಾರಿಕ ಸಂಬಂಧವಿತ್ತು ಎಂಬುದು ಗೊತ್ತಾಗುತ್ತದೆ.
ಅದೇ ರೀತಿ ಇಬ್ಬಳಿಕೆ ಹಳ್ಳಿಯ ಸಮೀಪವಿರುವ ಯತಿರಾಜರ ಬೆಟ್ಟ ಅಲ್ಲಿಯ ಐತಿಹ್ಯದ ಪ್ರಕಾರ ಮೂಲತಃ ಶೈವ ಪರಂಪರೆಗೆ ಸೇರಿದ್ದು ಸಿದ್ಢರು ಅಲ್ಲಿ ನೆಲೆಸಿದ್ದ್ರೆಂದೂ ಯತಿಯೊಬ್ಬ ತಪಸ್ಸು ಮಾಡಲು ಅಲ್ಲಿ ಸ್ಥಳಾವಕಾಶ ಕೋರಿದನೆಂದೂ ಕ್ರಮೇಣ ಆ ಪ್ರದೇಶವನ್ನೆಲ್ಲ ಆಕ್ರಮಿಸಿಕೊಳ್ಳಲು ಪ್ರಯತ್ನಿಸಿದಾಗ ಸಿದ್ಡರು ಒಪ್ಪಲಿಲ್ಲ.ಆಗ ಅವರನ್ನು ವಿಶ್ವರೂಪ ದರ್ಶನ ತೋರಿಸಿ ಹೆದರಿಸಿ ಅವರನ್ನು ಚನ್ನಪಟ್ಟಣದ ಸಿದ್ಧರ ಬೆಟ್ಟಕ್ಕೆ ಅಟ್ಟಿದನೆಂದೂ ತಿಳಿದುಬರುತ್ತದೆ.ಈಗಲೂ ಯತಿರಾಜರ ಬೆಟ್ಟದ ಮೇಲೆ ಗುಹೆಯಾಕೃತಿಯ ದೇವಾಲಯದಲ್ಲಿ ಯತಿಯ(ಪ್ರಾಯಶಃ ರಾಮಾನುಜಾಚಾರ್ಯರ) ಪ್ರತಿಮೆ ಇದ್ದು ಪೂಜೆಗೊಳ್ಳುತ್ತಿದೆ. ಯತಿರಾಜರ ಬೆಟ್ಟಕ್ಕೂ ಇಬ್ಬಳಿಕೆ ಹಳ್ಳಿಗೂ ಧಾರ್ಮಿಕ ಹಾಗೂ ಸಾಮಾಜಿಕ ಸಂಬಂಧವಿತ್ತೆಂದೂ ಹೇಳುತ್ತಾರೆ.ಯತಿರಾಜರ ಬೆಟ್ಟದ ಕಾಮಧೇನು ಇಬ್ಬಳಿಕೆ ಹಳ್ಳಿಯ ಹೊಲಮಾಳದಲ್ಲಿ ಮೇಯುತ್ತಿತ್ತೆಂದೂ ಅದನ್ನು ರಾತ್ರಿವೇಳೆ ದಲಿತನೊಬ್ಬ ನೋಡಿದನೆಂದೂ ಈ ವಿಷಯವನ್ನು ಯಾರಿಗೂ ಹೇಳಬಾರದೆಂದು ಕಟ್ಟಪ್ಪಣೆ ಮಾಡಿ ಹೇರಳವಾಗಿ ಸಂಪತ್ತನ್ನು ಅನುಗ್ರಹಿಸಿ ಒಂದು ಪಕ್ಷ ಬಾಯಿ ಬಿಟ್ಟರೆ ಆ ಸಂಪತ್ತು ನಾಶವಾಗುವುದೆಂದು ಎಚ್ಚರಿಸಿ ಮಾಯವಾಯಿತೆಂದು ಐತಿಹ್ಯವಿದೆ.ಕಾಲಕ್ರಮೇಣ ಸತ್ಯವನ್ನು ಮುಚ್ಚಿಡಲಾಗದೆ ಹೇಳಿಬಿಟ್ಟನೆಂದೂ ಅವನ ಸಂಪತ್ತೆಲ್ಲಾ ನಾಶವಾಯಿತೆಂದು ಹೇಳುತ್ತಾರೆ.
ರಾಮನಗರದ ಅರ್ಕೇಶ್ವರ ದೇವಸ್ಥಾನ ನಿರ್ಮಾಣ ಮಾಡಿದ ಭಕ್ಷಿ ಬಾಲಾಜಿರಾಯರು ಇಬ್ಬಳಿಕೆ ಹಳ್ಳಿಯ ಸೋಮೇಶ್ವರ ದೇವಸ್ಥಾನದಿಂದ ಮೂಲ ಸೋಮೇಶ್ವರ ಲಿಂಗವನ್ನು ತಂದು ಪ್ರತಿಷ್ಠಾಪನೆ ಮಾಡಿದರೆಂದು ಹೇಳುತ್ತಾರೆ.ಅಂದರೆ ಹದಿನೆಂಟನೆ ಶತಮಾನದವರೆಗೂ ಇಬ್ಬಳಿಕೆ ಹಳ್ಳಿ ನಾಶವಾಗಿದ್ದರೂ ದೇವಸ್ಥಾನ ಸುಸ್ಥಿತಿಯಲ್ಲಿತ್ತೆಂದು ಇದರಿಂದ ವಿದಿತವಾಗುತ್ತದೆ.
ಶೈವ ಸಂಸ್ಕೃತಿಯ ನೆಲೆವೀಡಾಗಿದ್ದ ಇಬ್ಬಳಿಕೆ ಹಳ್ಳಿ ನಾಶವಾಗಲು ಈ ಕೆಳ ಕಂಡ ಕಾರಣಗಳಲ್ಲಿ ಯಾವುದಾದರೂ ಒಂದಿರಬಹುದು ಎಂದು ನನಗನ್ನಿಸುತ್ತದೆ.
೧)ತೊರೆಯ ಸಮತಟ್ಟಾದ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದ ಕಾರಣದಿಂದ ಪ್ರವಾಹ ಬಂದು ಗ್ರಾಮ ನಾಶವಾಗಿರಬಹುದು.
೨)ಶೈವ ಮತ್ತು ವೈಷ್ಣವ ಪಂಥಗಳ ಸಂಘರ್ಷದಿಂದ ಈ ಊರು ನಾಶವಾಗಿರಬಹುದು.
೩)ಪ್ಲೇಗ್ ನಂಥ ಮಹಾಮಾರಿಗೆ ತುತ್ತಾಗಿ ಜನ ಖಾಲಿ ಮಾಡಿರಬಹುದು.
೪)ಇಬ್ಬಳಿಕೆ ಗ್ರಾಮ ಸಂಪತ್ಭರಿತವಾದ ಪ್ರಾಯಶಃ ಚಿನ್ನದಿಂದ ಸಮೃದ್ಧವಾಗಿದ್ದ ಪ್ರಮುಖ ವ್ಯಾಪಾರ ಕೇಂದ್ರವೂ ಆಗಿದ್ದರಿಂದ ಕಳ್ಳ ಕಾಕರ ಅಥವ ದರೋಡೆಕೋರರ ಧಾಳಿಯಿಂದಲೂ ನಾಶವಾಗಿರಬಹುದು.
ಇಬ್ಬಳಿಕೆ ಹಳ್ಳಿಯ ಪ್ರದೇಶದಲ್ಲಿ ಪಳೆಯುಳಿಕೆಗಳು ಶಾಸನಗಳು ಈಗಲೂ ಇವೆ.ಇಡೀ ಪ್ರದೇಶವನ್ನು ಉತ್ಖನನ ಮಾಡಿ ಸಂಶೋಧನೆ ಮಾಡಿದರೆ ಹೆಚ್ಚಿನ ವಿಷಯಗಳು ಲಭ್ಯವಾಗುತ್ತವೆ.
ಜೊತೆಗೆ ಪ್ರವಾಸೋದ್ಯಮ ಇಲಾಖೆ ಇತ್ತ ಕಡೆ ಗಮನ ಹರಿಸಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಂಡು ಉಳಿದಿರುವ ದೇಗುಲಗಳ ಜೊತೆಗೆ ಅವಶೇಷಗಳೊಡನೆ ಇನ್ನೂ ಇರುವ ಚಾರಿತ್ರಿಕ ಸೋಮೇಶ್ವರ ದೇವಸ್ಥಾನವನ್ನು ಪುನರ್ ನಿರ್ಮಿಸಿದರೆ ಒಂದು ಆಕರ್ಷಕ ಪ್ರವಾಸಿ ತಾಣವೂ ಅಗುತ್ತದೆ.

Wednesday, June 23, 2010

ಅಳಿವಿನಂಚಿನ ರಣಹದ್ದುಗಳಿಗೆ ಆಪತ್ತು






ರಾಮಗಿರಿ ಬೆಟ್ಟ ಐತಿಹಾಸಿಕವಾಗಿ ಪೌರಾಣಿಕವಾಗಿ ಪ್ರಸಿದ್ಧವಾಗಿದೆ.ಮಾಗಡಿ ಕೆಂಪೇಗೌಡ ಕಟ್ಟಿಸಿದ ಕೋಟೆಯ ಅವಶೇಷಗಳು ಈಗಲೂ ಇವೆ.ಇದು ಶ್ರೀ ರಾಮನ ಪುಣ್ಯ ಕ್ಷೇತ್ರ.ಶಿವನ ದೇವಾಲಯವೂ ಇಲ್ಲಿರುವುದರಿಂದ ಶಿವರಾಮಗಿರಿ ಎಂದೂ ಸುಪ್ರಸಿದ್ಧ.ಕಾಡು ಪಾರಿವಾಳಗಳು ವಾಸವಾಗಿರುವುದರಿಂದ ಕಪೋತಗಿರಿ ಎಂದೂ ಕರೆಯಲಾಗಿದೆ.ಇತ್ತೀಚೆಗೆ ಹಿಂದಿಯ ಜನಪ್ರಿಯ ಸಿನಿಮಾ ಶೋಲೆ ಚಿತ್ರಿತವಾಗಿ ಅದನ್ನು ರಾಮ್ ಗಡ್ ಎಂದು ಕರೆದುದರಿಂದ ಅದೇ ಹೆಸರು ಭಾರತದಲ್ಲೆಲ್ಲ ಜನಪ್ರಿಯವಾಗಿದೆ.ಇತ್ತೀಚೆಗೆ ಅಲ್ಲಿ ವಾಸಮಾಡುವ ವಿನಾಶದ ಅಂಚಿನಲ್ಲಿರುವ ರಣ ಹದ್ದು ಅಥವಾ ರಣಕಾಟಿ ಹದ್ದುಗಳು ಬೆಟ್ಟದ ಕಲ್ಲು ಕುಹರಗಳಲ್ಲಿ ಗೂಡು ಮಾಡಿಕೊಂಡು ಮೊಟ್ಟೆ ಇಟ್ಟು ಮರಿಮಾಡಿ, ತಮ್ಮ ಅಳಿದುಹೋಗಿರುವ ಸಂತತಿಯನ್ನು ವೃದ್ಧಿಮಾಡಿಕೊಳ್ಳುತ್ತಾ ಇರುವುದು ಪಕ್ಷಿ ಪ್ರಿಯರಿಗೆ ಮತ್ತು ಪರಿಸರ ಪ್ರಿಯರಿಗೆ ಸಂತೋಷವನ್ನು ಉಂಟುಮಾಡಿತ್ತು.ಆದರೆ ರಾಮನಗರ ಜಿಲ್ಲಾಡಳಿತ ರಾಮದೇವರ ಬೆಟ್ಟದ ತಪ್ಪಲಲ್ಲಿ ಅದರಲ್ಲೂ ರಣಹದ್ದುಗಳು ವಾಸಮಾಡುವ ಕೆಲವೇ ಮೀಟರುಗಳ ಅಂತರದಲ್ಲಿ ಮೋಜುದಾಣ(ರೆಸಾರ್ಟ್) ಮಾಡಲು ಅನುಮತಿ ಕೊಟ್ಟು, ಕೊಟ್ಟು,ಕಾಮಗಾರಿಯೂ ಪ್ರಾರಂಭವಾಗಿ,ಅಡ್ಡಿಪಡಿಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಹಲ್ಲೆ ಮಾಡಿ,ನ್ಯಾಯಾಲಯದಿಂದ ಯಾರೂ ಅಡ್ಡಿಪಡಿಸದಂತೆ ತಡೆಯಾಜ್ಞೆ ತಂದಿದ್ದಾರೆ.ಪರಿಸರ ವಿರೋಧಿಯೂ ಹಾಗೂ ರಣಕಾಟಿ ಹದ್ದುಗಳ ಅಪರೂಪ ಸಂತತಿಗೆ ಕುತ್ತು ತರುವಂಥ ಈ ಕೆಲಸವನ್ನು ವಿರೋಧಿಸಿ ರಾಮನಗರದ ವಿವಿಧ ಸಂಘಟನೆಗಳು ಸೇರಿ ಪ್ರತಿಭಟಿಸಿದೆವು.ಲೋಕಸಭಾ ಸದಸ್ಯರಾದ ಶ್ರೀ ಎಚ್.ಡಿ.ಕುಮಾರಸ್ವಾಮಿಯವರು ಇದಕ್ಕೆ ಸ್ಪಂದಿಸಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸುವಂತೆ ನೀಡಿದ ಸಲಹೆಯಂತೆ ಉಭಯತ್ರರೂ ಸೇರಿ ಸರ್ವೆ ಕಾರ್ಯ ಮುಗಿಸಿದ್ದಾರೆ.ಇದರ ವಿರುದ್ಧ ಹೋರಾಡಿದ ವಿವಿಧ ಸಂಘಟನೆಗಳ ಚಿತ್ರಗಳು ಇಲ್ಲಿವೆ.ಪರಿಸರ ಪ್ರಿಯರು ಸಾರ್ವಜನಿಕರು ಯುವಸಮೂಹ ಎಚ್ಚೆತ್ತುಕೊಂಡು ಇಂಥ ಅನುಚಿತ ಪರಿಸರ ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸಬೇಕಾಗಿದೆ.ಅಪರೂಪವಾಗಿರುವ ರಣಕಾಟಿ ಹದ್ದುಗಳು,ನವಿಲು,ಕಾಡುಕೋಳಿ,ಕಾಡುಹಂದಿ,ಕರಡಿ,ಚಿರತೆ ಮುಂತಾದ ಪ್ರಾಣಿ ಪಕ್ಷಿಗಳನ್ನು ಚಿತ್ರಗಳಲ್ಲಿ ನೋಡಬೇಕಾಗುತ್ತದೆ.

Tuesday, March 2, 2010

ಬಿಳಿಕಲ್ಲು ಬೆಟ್ಟದ ಬೆಡಗು











ರಾಮನಗರದ ನಮ್ಮ ವಿದ್ಯಾನಗರ ಬಡಾವಣೆಯಲ್ಲಿ ಮಹಿಳೆಯರ ಷಟಲ್ ಬ್ಯಾಡಮಿಂಟನ್ ಬಳಗ ಇದೆ.ಸಂಜೆ ಹೊತ್ತು ಮಧ್ಯಮ ವಯಸ್ಸಿನ ಮಹಿಳೆಯರು ಇಲ್ಲಿ ಆಟ ಆಡುತ್ತಾರೆ.ನಾನೂ ಮೊದಲಿನಿಂದ ಷಟಲ್ ಆಟ ಆಡಿದವನನೇ.ವಯಸ್ಸಾಗಿರುವುದರಿಂದ ನಾನೂ ಇವ್ರ ಜೊತೆಯೆ ಸೇರಿ ಆಟವಾಡುವುದರ ಜೊತೆಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಮಾಡುತ್ತೇವೆ.ಈ ವರ್ಷ ಶಿವರಾತ್ರಿಯನ್ನು ಆಟಗಾರರೆಲ್ಲ ಸೇರಿ ಷಟಲ್ ಬ್ಯಾಡ್ಮಿಂಟನ್ ಕೋರ್ಟನಲ್ಲಿಯೆ ಸರಳವಾಗಿ ಒಂದಿಷ್ಟು ರಸಾಯನ,ಕೋಸಂಬರಿ ಪಾನಕ ಮಾಡಿ ನಡು ರಾತ್ರಿಯವರೆಗೂ ಹೊನಲು ಬೆಳಕಿನಲ್ಲಿ ಆಟ ಆಡಿ ತಿಂದು ನಕ್ಕು ನಲಿದು ವಿರಮಿಸುವುದೆಂದು ತೀರ್ಮಾನಿಸಿದ್ದೆವು.ಸಂಜೆಗೆ ಮಹಿಳಾ ಆಟಗಾರರ ಮಧ್ಯೆ ಒಬ್ಬನೆ ಪುರುಷ ಸದಸ್ಯ ನಾನಾದ್ದರಿಂದ ತಿಂಡಿಗಳಿಗೆ ಬೇಕಾದ ಪದಾರ್ಥಗಳನ್ನು ಅಂಗಡಿಯಿಂದ ತಂದುಕೊಡುವ ಜವಾಬ್ದಾರಿ ನನ್ನದಾಗಿತ್ತು.
ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಕೈಪಿಡಿಯೊಂದನ್ನು ಸಿದ್ದಮಾಡುವ ಹಿನ್ನೆಲೆಯಲ್ಲಿ ದೊಡ್ಡಮರಳವಾಡಿ ಸಮೀಪ ಇರುವ ಬಿಳಿಕಲ್ ಬೆಟ್ಟಕ್ಕೆ ಭೇಟಿ ಕೊಡಬೇಕೆನ್ನುವ ಯೋಜನೆ ನನಗೆ ಮೊದಲಿನಿಂದಲೂ ಇತ್ತು.ಅಂತರ್ ಜಾಲ ತಾಣಗಳಲ್ಲಿಯೂ ಸಾಹಸಿ ಯುವಕರು ಚಾರಣ ಮಾಡುವ ಅನುಭವಗಳನ್ನು ಬರೆದಿರುವುದನ್ನು ಗಮನಿಸಿದ್ದೆ.ಆದರೆ ನಾನೇ ಖುದ್ದಾಗಿ ನೋಡಿ ಛಾಯಾ ಚಿತ್ರಗಳನ್ನು ತೆಗೆದು ಪುಸ್ತಕದಲ್ಲಿ ನೀಡಲು ಸುಮಾರು ದಿನಗಳಿಂದ ಹಂಬಲಿಸುತ್ತಿದ್ದೆ.ಶಿವರಾತ್ರಿ ದಿನ ನನ್ನ ಮಗನೂ ಸೇರಿದಂತೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ನನ್ನ ಹೆಂಡತಿಗೂ ರಜಾ ಇದ್ದ ಕಾರಣ ಸಂಜೆ ಶಿವರಾತ್ರಿ ಕಾರ್ಯಕ್ರಮದ ಹೊತ್ತಿಗೆ ಯಾಕೆ ಬಿಳಿ ಕಲ್ಲು ಬೆಟ್ಟಕ್ಕೆ ಹೋಗಿ ಬರಬಾರದು ಎಂದು ಆಲೋಚಿಸಿ ತಕ್ಷಣವೇ ಕಾರ್ಯಪ್ರವೃತ್ತರಾದೆವು.
ರಾಮನಗರದಿಂದ ಕನಕಪುರಕ್ಕೆ ಹೊರಟು ಅಲ್ಲಿಂದ ಮಳಗಾಳು ಮಾರ್ಗವಾಗಿ ಜವನಮ್ಮನದೊಡ್ಡಿ ದಾಟಿ ಚಾಕನಹಳ್ಳಿ ಕ್ರಾಸ್ ಸಿಗುತ್ತದೆ.ಅಲ್ಲಿಂದ ಬಲಗಡೆಗೆ ತಿರುಗಿ ಕಾಡಿನ ಮಧ್ಯದಲ್ಲಿ ಹಾದು ಹೋಗುವ ರಸ್ತೆಯಲ್ಲಿ ಸಾಗಿದರೆ ಸುಂಡಗಟ್ಟ ಸಿಗುತ್ತದೆ.ಕನಕಪುರದಿಂದ ಸುಂಡಗಟ್ಟ ೧೧ ಕಿ.ಮೀ.ಆಗುತ್ತದೆ.ಬಿಳಿಕಲ್ಲು ಬೆಟ್ಟಕ್ಕೆ ರಸ್ತೆ ಮಾರ್ಗವಾಗಿ ಬೆಂಗಳೂರಿನಿಂದ ಬರುವವರು ಹಾರೋಹಳ್ಳಿಯಲ್ಲಿ ಎಡಕ್ಕೆ ತಿರುಗಿ ಇದೇ ಚಾಕನಹಳ್ಳಿ ಕ್ರಾಸ್ ಬಳಿ ಬಂದು ಎಡಕ್ಕೆ ತಿರುಗಿ ಸುಂಡಗಟ್ಟದ ಮೂಲಕವೆ ಮಣ್ಣಿನ ರಸ್ತೆಯಲ್ಲಿ ೪.೫ ಕಿ.ಮೀ.ಇರುವ ಬೆಟ್ಟಕ್ಕೆ ವಾಹನದ ಮೂಲಕ ಹೋಗಬೇಕಾಗುತ್ತದೆ.
ನಾವು ಕಾರಿನಲ್ಲಿ ಸುಂಡಗಟ್ಟ ತಲುಪಿದಾಗ ೧೧ ಗಂಟೆ.ನಮ್ಮದು ಪೂರ್ವ ಯೋಜಿತ ಕಾರ್ಯಕ್ರಮವಲ್ಲವಾದ್ದರಿಂದ ಯಾವುದೇ ತಯಾರಿ ಇರಲಿಲ್ಲ ನೀರಿತ್ತು.ಬಿಸ್ಕೆಟ್ಟೋ ಬಾಳೆ ಹಣ್ಣೋ ಇದ್ದವೆಂದು ಕಾಣುತ್ತದೆ.ಹೆಚ್ಚು ಕಾಲ ಕಳೆಯಲೂ ಪುರುಸೊತ್ತಿರಲಿಲ್ಲ. ನನಗೆ ಸಂಜೆ ಕಾರ್ಯಕ್ರಮಕ್ಕೆ ಅಲ್ಲೆಲ್ಲಾದರೂ ಹಲಸಿನ ಹಣ್ಣು ಸಿಗಬಹುದೇ ಎಂಬುದರ ಕಡೆಗೇ ಗಮನವಿತ್ತು.
ಬೆಟ್ಟದ ಮೇಲೇರುತ್ತಿದ್ದಾಗ ಬೆಂಗಳೂರಿನಿಂದ ಕ್ರಿಕೆಟ್ ತರಬೇತಿಗೆಂದು ಬಂದು ಬೆಟ್ಟ ಹತ್ತುತ್ತಿದ್ದ ಪುಟಾಣಿ ಹುಡುಗರು ತಂಡೋಪತಂಡವಾಗಿ ಸಾಗುತ್ತಿದ್ದುದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದೆವು.ಬೆಟ್ಟದ ಮೇಲಕ್ಕೆ ತಲುಪಿದಾಗ ಆ ವಿಶಾಲವಾದ ಆಕಾಶ ಅಲೆಅಲೆಯಾಕಾರದ ಬೆಟ್ಟಸಾಲನ್ನು ನೋಡಿ ಖುಷಿಯಾಯಿತು.
ವಾಸ್ತವವಾಗಿ ಬಿಳಿಕಲ್ಲು ಬೆಟ್ಟ ನಾವು ಬೆಟ್ಟಗಳೆಂದು ಕರೆಯುವ ಏಕಶಿಲಾಕೃತಿಯ ಆಕಾರವಲ್ಲ.ಬದಲಿಗೆ ನಾವು ಗುಡ್ಡಗಳೆಂದು ಕರೆಯುವ ಮಣ್ಣಿನ ಮೊತ್ತ. ಬೆಟ್ಟಸಾಲು ಎನ್ನುವುದಕ್ಕಿಂತ ಇದನ್ನು ಘಟ್ಟಸಾಲು ಎಂದರೆ ಸರಿಹೋಗಬಹುದು.ಕರ್ನಾಟಕ ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಪ್ರದೇಶ.ಆನೆಗಳು ಸಂಚರಿಸುವ ಜಾಗ.ಹಾಗಾಗಿಯೆ ಇಲ್ಲಿ ಕಲ್ಲಿಗೆ ಆನೆಯಾಕೃತಿಯಲ್ಲಿ ಬಣ್ಣದ ಲೇಪನ ಮಾಡಲಾಗಿದೆ.ಸುಮಾರು ಸಮುದ್ರ ಮಟ್ಟದಿಂದ ೧೫೦೦ ಎತ್ತರವಿರುವ ಈ ಜಾಗದಲ್ಲಿ ಬಿಳಿಕಲ್ಲು ಬೆಟ್ಟ ಎಂದು ಕರೆಯಲು ಕಾರಣವಾಗಿರುವ ಒಂದು ದೊಡ್ಡ ಬಿಳಿಯ ಕಲ್ಲಿನ ಗುಂಡು ಇದೆ.ಇದಕ್ಕೆ ಸೇರಿದಂತೆ ರಂಗನಾಥ ಸ್ವಾಮಿಯ ಪುಟ್ಟ ದೇವಾಲಯ ಇದೆ.ವೈಷ್ಣವ ಸಂಪ್ರದಾಯದ ಬೃಂದಾವನಗಳು ಯತಿಗಳ ಸಮಾಧಿಗಳು ಇವೆ.ಮೇಲ್ಭಾಗದ ಪುಟ್ಟ ಕಟ್ಟಡದ ಛಾವಣಿಯಲ್ಲಿ ದೊಡ್ಡ ದೊಡ್ಡ ಕಾಡು ಹಲ್ಲಿಗಳು ಗಮನ ಸೆಳೆದವು.
ನಾಗರಿಕ ಬದುಕು ಬೇಸರವಾದಾಗ ಇಲ್ಲಿ ಬಂದು ಕುಟುಂಬ ಸಮೇತ ಒಂದಿಷ್ಟು ಕಾಲ ಕಳೆಯಲು ಎಲ್ಲ ವಿಪುಲ ಅವಕಾಶಗಳಿವೆ.ಸುತ್ತಲೂ ವಿಶಾಲವಾದ ಬಯಲು ಇದೆ.ಆದರೆ ಎಲ್ಲ ಪ್ರವಾಸಿ ತಾಣಗಳಂತೆಯೇ ಇಲ್ಲಿಯೂ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ.ನೀರಿನ ಟ್ಯಾಂಕ್ ಗಳಿವೆ! ನೀರಿಲ್ಲ.ನೆರಳಿಗೆ ಸುತ್ತ ಮುತ್ತ ಅರಣ್ಯ ಇಲಾಖೆಯವರೋ ಪ್ರವಾಸೋದ್ಯಮ ಇಲಾಖೆಯವರೋ ಒಂದಿಷ್ಟು ಮರ ಬೆಳೆಸಿದರೆ ದಣಿದು ಬರುವ ಭಕ್ತರಿಗೋ ಚಾರಣರಿಗೋ ಪ್ರವಾಸಿಗರಿಗೋ ಅನುಕೂಲವಾಗುತ್ತದೆ.
ಚಳಿಗಾಲ ಮತ್ತು ಬೇಸಿಗೆಯ ಸಂಗಮವಾಗಿರುವ ಶಿವರಾತ್ರಿಯಂದು ಬೆಳಗಿನ ೧೧ ಗಂಟೆಯ ಪ್ರವಾಸ ನಮಗೆ ಆಹ್ಲಾದಕರವಾಗಿಯೆ ಇತ್ತು. ಕಾರು ವಾಪಸ್ಸಾಗುವಾಗಿನ ಮೇಲೇಳುವ ದೂಳನ್ನೂ ನೋಡಿ ಸಂತೋಷಿಸುತ್ತ,ಹೆಬ್ಬಾವಿನಾಕೃತಿಯ ಟಾರು ರಸ್ತೆಯಲ್ಲಿ ಹಾದು ಕನಕಪುರಕ್ಕೆ ಬಂದು ಅಚ್ಚುಕಟ್ಟಾಗಿ ಊಟ ಮಾಡಲೂ ಭೋಜನ ಶಾಲೆಗಳನ್ನು ಕಾಣದೆ ರಾಮನಗರಕ್ಕೆ ಹಿಂತಿರುಗಿದೆವು.

Saturday, October 31, 2009

ಕವಿವನದಲ್ಲಿ ಕಾವ್ಯ ಕಲರವ






ಇತ್ತೀಚೆಗೆ ಚನ್ನಪಟ್ಟಣ ತಾಲ್ಲೂಕು ಭೂಹಳ್ಳಿಯಲ್ಲಿ ಉಪನ್ಯಾಸಕ ಮತ್ತು ಕವಿ ಭೂಹಳ್ಳಿ ಪುಟ್ಟಸ್ವಾಮಿಯವರು ಪರಿಸರ ಪ್ರೀತಿಯಿಂದ ಅಭಿವೃದ್ಧಿಪಡಿಸಿರುವ ಮತ್ತು ಅವರೇ ಕವಿವನ ಎಂದು ಹೆಸರಿಸಿರುವ ಗುಂಡು ತೋಪಿನಲ್ಲಿ ರಾಮನಗರ ಜಿಲ್ಲಾ ಕರ್ನಾಟಕ ಸಾಹಿತ್ಯ ಪರಿಷತ್ತು "ಕವಿವನದಲ್ಲಿ ಕಾವ್ಯ ಕಲರವ" ಎಂಬ ಕವಿಗೋಷ್ಠಿಯನ್ನು ಆಯೋಜಿಸಿತ್ತು.ಬೆಂಗಳೂರಿನ ಕವಿ ನಾಟಕಕಾರ ಎಲ್.ಎನ್.ಮುಕುಂದರಾಜ್,ರೇವಣ್ಣಾರಾಧ್ಯ,ವಡ್ಡಗೆರೆ ನಾಗರಾಜಯ್ಯ,ಕವಿವನದ ನಿರ್ಮಾತೃ ಭೂಹಳ್ಳಿ ಪುಟ್ಟಸ್ವಾಮಿ,ಜಾನಪದಲೋಕದ ಸರಸವಾಣಿ,ಉಪನ್ಯಾಸಕಿ ಟಿ.ಪದ್ಮ,ಪತ್ರಕರ್ತೆ ಸುಜಾತ ಕುಮುಟ,ನಾಟಕ ನಿರ್ದೇಶಕ ದೊಡ್ಡಬಳ್ಳಾಪುರದ ಟಿ.ಎಚ್.ಲವಕುಮಾರ್,ದೇವರಾಜು,ಕರ್ನಾಟಕ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಾಹಿತಿ ಪ್ರೊ.ಎಂ.ಶಿವನಂಜಯ್ಯ ಮುಂತಾದವರು ತಮ್ಮ ಸ್ವರಚಿತ ಮತ್ತು ಕನ್ನಡದ ಸುಪ್ರಸಿದ್ಡ ಕವಿಗಳ ಕವನಗಳನ್ನೂ ವಾಚಿಸಿದರು.
ಹಳ್ಳಿಗಳ ಬದುಕಿನ ಅನುಭವವೇ ಇಲ್ಲದ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನ ರಾಷ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಮೂಕವಿಸ್ಮಿತರಾಗಿ ಪ್ರಕೃತಿಯ ಬೆಡಗು ಬೆರಗುಗಳನ್ನು ಕಣ್ತುಂಬಿಸಿಕೊಂಡರು.ಹಳ್ಳಿಗರೂ ಉತ್ಸಾಹದಿಂದ ಪಾಲುಗೊಂಡರು.ಹುರಿದ ಕಡಲೆ ಕಾಯಿ ಬೆಲ್ಲ ಸವಿಯುತ್ತ, ಬೆಲ್ಲದ ಬಿಸಿ ಟೀ ಸೇವಿಸುತ್ತ ಸಂಜೆಯ ಸರಾಗದಲ್ಲಿ ಸುಂದರ ಸ್ವಪ್ನಲೋಕದಲ್ಲಿ ಕಾಲದ ಹಂಗಿಲ್ಲದೆ ನಲಿದರು.ಈ ಸುಂದರ ಸಂಜೆಯ ಚಿತ್ರಗಳನ್ನು ನಿಮಗೆ ನೀಡುತ್ತಿದ್ದೇನೆ.

Friday, October 16, 2009

ವೈ.ಜಿ.ಗುಡ್ಡ ಜಲಾಶಯ ಪ್ರವಾಸಿತಾಣವೋ ಪ್ರಯಾಸಿ ತಾಣವೋ?






ಎತ್ತಿನ ಮನೆ ಗುಲಗಂಜಿ ಗುಡ್ಡ ಮಾಗಡಿಯಿಂದ ಜಾಲಮಂಗಲ ಮಾರ್ಗದಲ್ಲಿ ಮತ್ತಿಕೆರೆಯ ಎಡತಿರುವಿನಲ್ಲಿ ೩.೫ ಕಿ.ಮೀ.ದೂರದಲ್ಲಿರುವ ಚಿಕ್ಕ ಜಲಾಶಯ.ಮಾಗಡಿಯಿಂದ ಹುಲಿಯೂರು ದುರ್ಗ ರಸ್ತೆಯಲ್ಲಿ ಅಗಲಕೋಟೆ ಹ್ಯಾಂಡ್ ಪೋಸ್ಟ್ ಬಳಿ ಎಡಕ್ಕೆತಿರುಗಿ ೬ ಕಿ.ಮೀ.ಸಾಗಿದರೆ ಮತ್ತಿಕೆರೆ ಸಿಗುತ್ತದೆ.ಇನ್ನೂ ಸಮೀಪದ ಮಾರ್ಗವೆಂದರೆ ಮಾಗಡಿಯ ಕೋಟೆಯ ಎದುರು ಎಡಕ್ಕೆ ತಿರುಗುವ ರಸ್ತೆಯಲ್ಲಿ ಹೋದರೆ ನೇರವಾಗಿ ಮತ್ತಿಕೆರೆಯ ಬಳಿಗೇ ಹೋಗಬಹುದು.
ವೈ.ಜಿ.ಗುಡ್ಡ ಕಣ್ವ ನದಿಗೆ ಅಡ್ಡಲಾಗಿ ಕಟ್ಟಿರುವ ಪುಟ್ಟ ಜಲಾಶಯ.ಸುಂದರ ಹಸಿರು ಗುಡ್ಡಗಳು,ವಿವಿಧಾಕೃತಿಯ ಬೆಟ್ಟಗಳು ಮನೋಹರವಾದ ದೃಶ್ಯ ವೈಭವ ಕಣ್ಸೆಳೆಯುತ್ತವೆ.ಸಣ್ಣ ನೀರಾವರಿ ಇಲಾಖೆಗೆ ಸೇರಿದ ಈ ಜಲಾಶಯದಿಂದ ಕೆಲವೆ ಎಕರೆಗಳಷ್ಟು ನೀರಾವರಿ ಸಾಧ್ಯವಾಗಿದೆ.ಕೆರೆ ನಿರ್ಮಾಣವಾದಂದಿನಿಂದ ಈ ಪ್ರದೇಶದಲ್ಲಿ ಸರಿಯಾಗಿ ಮಳೆಯೇ ಆಗದಿರುವುದರಿಂದ ತುಂಬಿತುಳಿಕಿದ್ದು ಕಡಿಮೆ.ಮೀನುಗಾರಿಕೆಗಷ್ಟೇ ಇದು ಬಳಕೆಯಾಗುತ್ತಿದೆ.
ಒಂದು ಉತ್ತಮ ಪ್ರವಾಸಿ ತಾಣವಾಗಬಹುದಾಗಿದ್ದ ಈ ಜಲಾಶಯಕ್ಕೆ ಹೋಗುವ ದಾರಿಯೇ ಚನ್ನಾಗಿಲ್ಲ. ಇಲ್ಲಿಗೆ ಇಂಜಿನೀಯರುಗಳೂ ಹೋಗುತ್ತಿಲ್ಲವೆಂದು ಕಾಣುತ್ತದೆ.ಒಂದಿಷ್ಟು ಹೊತ್ತು ಕೂತು ಜೊತೆಯಲ್ಲಿ ತಂದ ತಿಂಡಿಯನ್ನೋ ಊಟವನ್ನೋ ಮಾಡಿ ಹೋಗೋಣವೆಂದರೆ ತಲೆ ಮೇಲೆ ನೆರಳೂ ಇಲ್ಲ,ಕೂತು ಜಲಾಶಯದ ಸೌಂದರ್ಯವನ್ನು ನೋಡೋಣವೆಂದರೆ ಕಲ್ಲಿನ ಚಪ್ಪಡಿಯ ಆಸನಗಳು ಇಲ್ಲಿಲ್ಲ.ಅನೇಕರು ವಿದೇಶಗಳಿಗೆ ಹೋಗಿ ಸುಂದರ ತಾಣಗಳನ್ನು ನೋಡಿ ಹೊಗಳುತ್ತಾರೆ.ಅಂತಹ ತಾಣಗಳನ್ನು ನಿರ್ಮಿಸಲು ಅಲ್ಲಿಯ ಜನ ಮತ್ತು ಸರ್ಕಾರ ಎಷ್ಟು ಶ್ರಮ ಮತ್ತು ಶ್ರದ್ಡೆಯಿಂದ ಕಾರ್ಯ ನಿರ್ವಹಿಸುತ್ತಾರೆಂಬುದನ್ನು ಮರೆಯುತ್ತಾರೆ.ಎಷಾದರೂ ಈ ಜನಕ್ಕೆ ಹಿತ್ತಲ ಗಿಡ ಮದ್ದಲ್ಲ.
ಹೀಗೆ ಅಲಕ್ಷ್ಯಕ್ಕೀಡಾಗಿರುವ ಎಷ್ಟೋ ಪ್ರವಾಸಿ ತಾಣಗಳು ಪ್ರಯಾಸದ ತಾಣಗಳಾಗಿರುವುದನ್ನು ಎಲ್ಲೆಲ್ಲೂ ನೋಡಬಹುದಾಗಿದೆ.