Tuesday, March 2, 2010

ಬಿಳಿಕಲ್ಲು ಬೆಟ್ಟದ ಬೆಡಗು











ರಾಮನಗರದ ನಮ್ಮ ವಿದ್ಯಾನಗರ ಬಡಾವಣೆಯಲ್ಲಿ ಮಹಿಳೆಯರ ಷಟಲ್ ಬ್ಯಾಡಮಿಂಟನ್ ಬಳಗ ಇದೆ.ಸಂಜೆ ಹೊತ್ತು ಮಧ್ಯಮ ವಯಸ್ಸಿನ ಮಹಿಳೆಯರು ಇಲ್ಲಿ ಆಟ ಆಡುತ್ತಾರೆ.ನಾನೂ ಮೊದಲಿನಿಂದ ಷಟಲ್ ಆಟ ಆಡಿದವನನೇ.ವಯಸ್ಸಾಗಿರುವುದರಿಂದ ನಾನೂ ಇವ್ರ ಜೊತೆಯೆ ಸೇರಿ ಆಟವಾಡುವುದರ ಜೊತೆಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಮಾಡುತ್ತೇವೆ.ಈ ವರ್ಷ ಶಿವರಾತ್ರಿಯನ್ನು ಆಟಗಾರರೆಲ್ಲ ಸೇರಿ ಷಟಲ್ ಬ್ಯಾಡ್ಮಿಂಟನ್ ಕೋರ್ಟನಲ್ಲಿಯೆ ಸರಳವಾಗಿ ಒಂದಿಷ್ಟು ರಸಾಯನ,ಕೋಸಂಬರಿ ಪಾನಕ ಮಾಡಿ ನಡು ರಾತ್ರಿಯವರೆಗೂ ಹೊನಲು ಬೆಳಕಿನಲ್ಲಿ ಆಟ ಆಡಿ ತಿಂದು ನಕ್ಕು ನಲಿದು ವಿರಮಿಸುವುದೆಂದು ತೀರ್ಮಾನಿಸಿದ್ದೆವು.ಸಂಜೆಗೆ ಮಹಿಳಾ ಆಟಗಾರರ ಮಧ್ಯೆ ಒಬ್ಬನೆ ಪುರುಷ ಸದಸ್ಯ ನಾನಾದ್ದರಿಂದ ತಿಂಡಿಗಳಿಗೆ ಬೇಕಾದ ಪದಾರ್ಥಗಳನ್ನು ಅಂಗಡಿಯಿಂದ ತಂದುಕೊಡುವ ಜವಾಬ್ದಾರಿ ನನ್ನದಾಗಿತ್ತು.
ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಕೈಪಿಡಿಯೊಂದನ್ನು ಸಿದ್ದಮಾಡುವ ಹಿನ್ನೆಲೆಯಲ್ಲಿ ದೊಡ್ಡಮರಳವಾಡಿ ಸಮೀಪ ಇರುವ ಬಿಳಿಕಲ್ ಬೆಟ್ಟಕ್ಕೆ ಭೇಟಿ ಕೊಡಬೇಕೆನ್ನುವ ಯೋಜನೆ ನನಗೆ ಮೊದಲಿನಿಂದಲೂ ಇತ್ತು.ಅಂತರ್ ಜಾಲ ತಾಣಗಳಲ್ಲಿಯೂ ಸಾಹಸಿ ಯುವಕರು ಚಾರಣ ಮಾಡುವ ಅನುಭವಗಳನ್ನು ಬರೆದಿರುವುದನ್ನು ಗಮನಿಸಿದ್ದೆ.ಆದರೆ ನಾನೇ ಖುದ್ದಾಗಿ ನೋಡಿ ಛಾಯಾ ಚಿತ್ರಗಳನ್ನು ತೆಗೆದು ಪುಸ್ತಕದಲ್ಲಿ ನೀಡಲು ಸುಮಾರು ದಿನಗಳಿಂದ ಹಂಬಲಿಸುತ್ತಿದ್ದೆ.ಶಿವರಾತ್ರಿ ದಿನ ನನ್ನ ಮಗನೂ ಸೇರಿದಂತೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ನನ್ನ ಹೆಂಡತಿಗೂ ರಜಾ ಇದ್ದ ಕಾರಣ ಸಂಜೆ ಶಿವರಾತ್ರಿ ಕಾರ್ಯಕ್ರಮದ ಹೊತ್ತಿಗೆ ಯಾಕೆ ಬಿಳಿ ಕಲ್ಲು ಬೆಟ್ಟಕ್ಕೆ ಹೋಗಿ ಬರಬಾರದು ಎಂದು ಆಲೋಚಿಸಿ ತಕ್ಷಣವೇ ಕಾರ್ಯಪ್ರವೃತ್ತರಾದೆವು.
ರಾಮನಗರದಿಂದ ಕನಕಪುರಕ್ಕೆ ಹೊರಟು ಅಲ್ಲಿಂದ ಮಳಗಾಳು ಮಾರ್ಗವಾಗಿ ಜವನಮ್ಮನದೊಡ್ಡಿ ದಾಟಿ ಚಾಕನಹಳ್ಳಿ ಕ್ರಾಸ್ ಸಿಗುತ್ತದೆ.ಅಲ್ಲಿಂದ ಬಲಗಡೆಗೆ ತಿರುಗಿ ಕಾಡಿನ ಮಧ್ಯದಲ್ಲಿ ಹಾದು ಹೋಗುವ ರಸ್ತೆಯಲ್ಲಿ ಸಾಗಿದರೆ ಸುಂಡಗಟ್ಟ ಸಿಗುತ್ತದೆ.ಕನಕಪುರದಿಂದ ಸುಂಡಗಟ್ಟ ೧೧ ಕಿ.ಮೀ.ಆಗುತ್ತದೆ.ಬಿಳಿಕಲ್ಲು ಬೆಟ್ಟಕ್ಕೆ ರಸ್ತೆ ಮಾರ್ಗವಾಗಿ ಬೆಂಗಳೂರಿನಿಂದ ಬರುವವರು ಹಾರೋಹಳ್ಳಿಯಲ್ಲಿ ಎಡಕ್ಕೆ ತಿರುಗಿ ಇದೇ ಚಾಕನಹಳ್ಳಿ ಕ್ರಾಸ್ ಬಳಿ ಬಂದು ಎಡಕ್ಕೆ ತಿರುಗಿ ಸುಂಡಗಟ್ಟದ ಮೂಲಕವೆ ಮಣ್ಣಿನ ರಸ್ತೆಯಲ್ಲಿ ೪.೫ ಕಿ.ಮೀ.ಇರುವ ಬೆಟ್ಟಕ್ಕೆ ವಾಹನದ ಮೂಲಕ ಹೋಗಬೇಕಾಗುತ್ತದೆ.
ನಾವು ಕಾರಿನಲ್ಲಿ ಸುಂಡಗಟ್ಟ ತಲುಪಿದಾಗ ೧೧ ಗಂಟೆ.ನಮ್ಮದು ಪೂರ್ವ ಯೋಜಿತ ಕಾರ್ಯಕ್ರಮವಲ್ಲವಾದ್ದರಿಂದ ಯಾವುದೇ ತಯಾರಿ ಇರಲಿಲ್ಲ ನೀರಿತ್ತು.ಬಿಸ್ಕೆಟ್ಟೋ ಬಾಳೆ ಹಣ್ಣೋ ಇದ್ದವೆಂದು ಕಾಣುತ್ತದೆ.ಹೆಚ್ಚು ಕಾಲ ಕಳೆಯಲೂ ಪುರುಸೊತ್ತಿರಲಿಲ್ಲ. ನನಗೆ ಸಂಜೆ ಕಾರ್ಯಕ್ರಮಕ್ಕೆ ಅಲ್ಲೆಲ್ಲಾದರೂ ಹಲಸಿನ ಹಣ್ಣು ಸಿಗಬಹುದೇ ಎಂಬುದರ ಕಡೆಗೇ ಗಮನವಿತ್ತು.
ಬೆಟ್ಟದ ಮೇಲೇರುತ್ತಿದ್ದಾಗ ಬೆಂಗಳೂರಿನಿಂದ ಕ್ರಿಕೆಟ್ ತರಬೇತಿಗೆಂದು ಬಂದು ಬೆಟ್ಟ ಹತ್ತುತ್ತಿದ್ದ ಪುಟಾಣಿ ಹುಡುಗರು ತಂಡೋಪತಂಡವಾಗಿ ಸಾಗುತ್ತಿದ್ದುದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದೆವು.ಬೆಟ್ಟದ ಮೇಲಕ್ಕೆ ತಲುಪಿದಾಗ ಆ ವಿಶಾಲವಾದ ಆಕಾಶ ಅಲೆಅಲೆಯಾಕಾರದ ಬೆಟ್ಟಸಾಲನ್ನು ನೋಡಿ ಖುಷಿಯಾಯಿತು.
ವಾಸ್ತವವಾಗಿ ಬಿಳಿಕಲ್ಲು ಬೆಟ್ಟ ನಾವು ಬೆಟ್ಟಗಳೆಂದು ಕರೆಯುವ ಏಕಶಿಲಾಕೃತಿಯ ಆಕಾರವಲ್ಲ.ಬದಲಿಗೆ ನಾವು ಗುಡ್ಡಗಳೆಂದು ಕರೆಯುವ ಮಣ್ಣಿನ ಮೊತ್ತ. ಬೆಟ್ಟಸಾಲು ಎನ್ನುವುದಕ್ಕಿಂತ ಇದನ್ನು ಘಟ್ಟಸಾಲು ಎಂದರೆ ಸರಿಹೋಗಬಹುದು.ಕರ್ನಾಟಕ ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಪ್ರದೇಶ.ಆನೆಗಳು ಸಂಚರಿಸುವ ಜಾಗ.ಹಾಗಾಗಿಯೆ ಇಲ್ಲಿ ಕಲ್ಲಿಗೆ ಆನೆಯಾಕೃತಿಯಲ್ಲಿ ಬಣ್ಣದ ಲೇಪನ ಮಾಡಲಾಗಿದೆ.ಸುಮಾರು ಸಮುದ್ರ ಮಟ್ಟದಿಂದ ೧೫೦೦ ಎತ್ತರವಿರುವ ಈ ಜಾಗದಲ್ಲಿ ಬಿಳಿಕಲ್ಲು ಬೆಟ್ಟ ಎಂದು ಕರೆಯಲು ಕಾರಣವಾಗಿರುವ ಒಂದು ದೊಡ್ಡ ಬಿಳಿಯ ಕಲ್ಲಿನ ಗುಂಡು ಇದೆ.ಇದಕ್ಕೆ ಸೇರಿದಂತೆ ರಂಗನಾಥ ಸ್ವಾಮಿಯ ಪುಟ್ಟ ದೇವಾಲಯ ಇದೆ.ವೈಷ್ಣವ ಸಂಪ್ರದಾಯದ ಬೃಂದಾವನಗಳು ಯತಿಗಳ ಸಮಾಧಿಗಳು ಇವೆ.ಮೇಲ್ಭಾಗದ ಪುಟ್ಟ ಕಟ್ಟಡದ ಛಾವಣಿಯಲ್ಲಿ ದೊಡ್ಡ ದೊಡ್ಡ ಕಾಡು ಹಲ್ಲಿಗಳು ಗಮನ ಸೆಳೆದವು.
ನಾಗರಿಕ ಬದುಕು ಬೇಸರವಾದಾಗ ಇಲ್ಲಿ ಬಂದು ಕುಟುಂಬ ಸಮೇತ ಒಂದಿಷ್ಟು ಕಾಲ ಕಳೆಯಲು ಎಲ್ಲ ವಿಪುಲ ಅವಕಾಶಗಳಿವೆ.ಸುತ್ತಲೂ ವಿಶಾಲವಾದ ಬಯಲು ಇದೆ.ಆದರೆ ಎಲ್ಲ ಪ್ರವಾಸಿ ತಾಣಗಳಂತೆಯೇ ಇಲ್ಲಿಯೂ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ.ನೀರಿನ ಟ್ಯಾಂಕ್ ಗಳಿವೆ! ನೀರಿಲ್ಲ.ನೆರಳಿಗೆ ಸುತ್ತ ಮುತ್ತ ಅರಣ್ಯ ಇಲಾಖೆಯವರೋ ಪ್ರವಾಸೋದ್ಯಮ ಇಲಾಖೆಯವರೋ ಒಂದಿಷ್ಟು ಮರ ಬೆಳೆಸಿದರೆ ದಣಿದು ಬರುವ ಭಕ್ತರಿಗೋ ಚಾರಣರಿಗೋ ಪ್ರವಾಸಿಗರಿಗೋ ಅನುಕೂಲವಾಗುತ್ತದೆ.
ಚಳಿಗಾಲ ಮತ್ತು ಬೇಸಿಗೆಯ ಸಂಗಮವಾಗಿರುವ ಶಿವರಾತ್ರಿಯಂದು ಬೆಳಗಿನ ೧೧ ಗಂಟೆಯ ಪ್ರವಾಸ ನಮಗೆ ಆಹ್ಲಾದಕರವಾಗಿಯೆ ಇತ್ತು. ಕಾರು ವಾಪಸ್ಸಾಗುವಾಗಿನ ಮೇಲೇಳುವ ದೂಳನ್ನೂ ನೋಡಿ ಸಂತೋಷಿಸುತ್ತ,ಹೆಬ್ಬಾವಿನಾಕೃತಿಯ ಟಾರು ರಸ್ತೆಯಲ್ಲಿ ಹಾದು ಕನಕಪುರಕ್ಕೆ ಬಂದು ಅಚ್ಚುಕಟ್ಟಾಗಿ ಊಟ ಮಾಡಲೂ ಭೋಜನ ಶಾಲೆಗಳನ್ನು ಕಾಣದೆ ರಾಮನಗರಕ್ಕೆ ಹಿಂತಿರುಗಿದೆವು.

No comments: