Wednesday, June 23, 2010

ಅಳಿವಿನಂಚಿನ ರಣಹದ್ದುಗಳಿಗೆ ಆಪತ್ತು






ರಾಮಗಿರಿ ಬೆಟ್ಟ ಐತಿಹಾಸಿಕವಾಗಿ ಪೌರಾಣಿಕವಾಗಿ ಪ್ರಸಿದ್ಧವಾಗಿದೆ.ಮಾಗಡಿ ಕೆಂಪೇಗೌಡ ಕಟ್ಟಿಸಿದ ಕೋಟೆಯ ಅವಶೇಷಗಳು ಈಗಲೂ ಇವೆ.ಇದು ಶ್ರೀ ರಾಮನ ಪುಣ್ಯ ಕ್ಷೇತ್ರ.ಶಿವನ ದೇವಾಲಯವೂ ಇಲ್ಲಿರುವುದರಿಂದ ಶಿವರಾಮಗಿರಿ ಎಂದೂ ಸುಪ್ರಸಿದ್ಧ.ಕಾಡು ಪಾರಿವಾಳಗಳು ವಾಸವಾಗಿರುವುದರಿಂದ ಕಪೋತಗಿರಿ ಎಂದೂ ಕರೆಯಲಾಗಿದೆ.ಇತ್ತೀಚೆಗೆ ಹಿಂದಿಯ ಜನಪ್ರಿಯ ಸಿನಿಮಾ ಶೋಲೆ ಚಿತ್ರಿತವಾಗಿ ಅದನ್ನು ರಾಮ್ ಗಡ್ ಎಂದು ಕರೆದುದರಿಂದ ಅದೇ ಹೆಸರು ಭಾರತದಲ್ಲೆಲ್ಲ ಜನಪ್ರಿಯವಾಗಿದೆ.ಇತ್ತೀಚೆಗೆ ಅಲ್ಲಿ ವಾಸಮಾಡುವ ವಿನಾಶದ ಅಂಚಿನಲ್ಲಿರುವ ರಣ ಹದ್ದು ಅಥವಾ ರಣಕಾಟಿ ಹದ್ದುಗಳು ಬೆಟ್ಟದ ಕಲ್ಲು ಕುಹರಗಳಲ್ಲಿ ಗೂಡು ಮಾಡಿಕೊಂಡು ಮೊಟ್ಟೆ ಇಟ್ಟು ಮರಿಮಾಡಿ, ತಮ್ಮ ಅಳಿದುಹೋಗಿರುವ ಸಂತತಿಯನ್ನು ವೃದ್ಧಿಮಾಡಿಕೊಳ್ಳುತ್ತಾ ಇರುವುದು ಪಕ್ಷಿ ಪ್ರಿಯರಿಗೆ ಮತ್ತು ಪರಿಸರ ಪ್ರಿಯರಿಗೆ ಸಂತೋಷವನ್ನು ಉಂಟುಮಾಡಿತ್ತು.ಆದರೆ ರಾಮನಗರ ಜಿಲ್ಲಾಡಳಿತ ರಾಮದೇವರ ಬೆಟ್ಟದ ತಪ್ಪಲಲ್ಲಿ ಅದರಲ್ಲೂ ರಣಹದ್ದುಗಳು ವಾಸಮಾಡುವ ಕೆಲವೇ ಮೀಟರುಗಳ ಅಂತರದಲ್ಲಿ ಮೋಜುದಾಣ(ರೆಸಾರ್ಟ್) ಮಾಡಲು ಅನುಮತಿ ಕೊಟ್ಟು, ಕೊಟ್ಟು,ಕಾಮಗಾರಿಯೂ ಪ್ರಾರಂಭವಾಗಿ,ಅಡ್ಡಿಪಡಿಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಹಲ್ಲೆ ಮಾಡಿ,ನ್ಯಾಯಾಲಯದಿಂದ ಯಾರೂ ಅಡ್ಡಿಪಡಿಸದಂತೆ ತಡೆಯಾಜ್ಞೆ ತಂದಿದ್ದಾರೆ.ಪರಿಸರ ವಿರೋಧಿಯೂ ಹಾಗೂ ರಣಕಾಟಿ ಹದ್ದುಗಳ ಅಪರೂಪ ಸಂತತಿಗೆ ಕುತ್ತು ತರುವಂಥ ಈ ಕೆಲಸವನ್ನು ವಿರೋಧಿಸಿ ರಾಮನಗರದ ವಿವಿಧ ಸಂಘಟನೆಗಳು ಸೇರಿ ಪ್ರತಿಭಟಿಸಿದೆವು.ಲೋಕಸಭಾ ಸದಸ್ಯರಾದ ಶ್ರೀ ಎಚ್.ಡಿ.ಕುಮಾರಸ್ವಾಮಿಯವರು ಇದಕ್ಕೆ ಸ್ಪಂದಿಸಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸುವಂತೆ ನೀಡಿದ ಸಲಹೆಯಂತೆ ಉಭಯತ್ರರೂ ಸೇರಿ ಸರ್ವೆ ಕಾರ್ಯ ಮುಗಿಸಿದ್ದಾರೆ.ಇದರ ವಿರುದ್ಧ ಹೋರಾಡಿದ ವಿವಿಧ ಸಂಘಟನೆಗಳ ಚಿತ್ರಗಳು ಇಲ್ಲಿವೆ.ಪರಿಸರ ಪ್ರಿಯರು ಸಾರ್ವಜನಿಕರು ಯುವಸಮೂಹ ಎಚ್ಚೆತ್ತುಕೊಂಡು ಇಂಥ ಅನುಚಿತ ಪರಿಸರ ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸಬೇಕಾಗಿದೆ.ಅಪರೂಪವಾಗಿರುವ ರಣಕಾಟಿ ಹದ್ದುಗಳು,ನವಿಲು,ಕಾಡುಕೋಳಿ,ಕಾಡುಹಂದಿ,ಕರಡಿ,ಚಿರತೆ ಮುಂತಾದ ಪ್ರಾಣಿ ಪಕ್ಷಿಗಳನ್ನು ಚಿತ್ರಗಳಲ್ಲಿ ನೋಡಬೇಕಾಗುತ್ತದೆ.

No comments: